Publish Date: Fri, 29 Dec 2023 (09:55 IST)
Updated Date: Fri, 29 Dec 2023 (10:04 IST)
ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ರನೌಟ್ ಆದ ಜಸ್ಪ್ರೀತ್ ಬುಮ್ರಾ ಸಹ ಆಟಗಾರ ವಿರಾಟ್ ಕೊಹ್ಲಿ ಮೇಲೆ ಸಿಟ್ಟಾದ ಘಟನೆ ನಡೆದಿತ್ತು.
ವಿರಾಟ್ ಕೊಹ್ಲಿ ಪಿಚ್ ನಡುವೆ ವೇಗವಾಗಿ ಓಡುತ್ತಾರೆ. ಹೀಗಾಗಿ ಅವರ ಸಹ ಆಟಗಾರ ಕೂಡಾ ಅಷ್ಟೇ ಚುರುಕಾಗಿರಬೇಕಾಗುತ್ತದೆ. ಇಲ್ಲದೇ ಹೋದರೆ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಈ ಪಂದ್ಯದಲ್ಲೂ ಅದೇ ಆಗಿತ್ತು. ಕೊಹ್ಲಿ ವೇಗವಾಗಿ ಓಡಿ ಎರಡನೇ ರನ್ ಕದಿಯುವ ಯತ್ನದಲ್ಲಿದ್ದರೆ, ಇದನ್ನು ನಿರೀಕ್ಷಿಸಿರದ ಬುಮ್ರಾ ರನೌಟ್ ಆದರು.
ಆಗ ಅವರು ಇನ್ನೂ ಖಾತೆಯನ್ನೇ ತೆರೆದಿರಲಿಲ್ಲ. ಭಾರತ ಕೂಡಾ ಸಂಕಷ್ಟದಲ್ಲಿತ್ತು. ಹೀಗಾಗಿ ಬುಮ್ರಾಗೆ ಕೊಹ್ಲಿ ಮೇಲೆ ಸಿಟ್ಟು ಬಂದಿತ್ತು. ಆದರೆ ಪಂದ್ಯದ ಬಳಿಕ ಕೊಹ್ಲಿ ಸಿಟ್ಟಿನಲ್ಲಿದ್ದ ಬುಮ್ರಾರನ್ನು ಸಮಾಧಾನಪಡಿಸಿದರು. ಬುಮ್ರಾ ತಲೆ ಸವರಿ ತಮ್ಮಿಂದಾಗಿ ರನೌಟ್ ಆಗಿದ್ದಕ್ಕೆ ಕ್ಷಮೆ ಯಾಚಿಸಿದ ದೃಶ್ಯ ಕಂಡುಬಂದಿದೆ.
ರನೌಟ್ ಆದ ಬಳಿಕ ಡ್ರೆಸ್ಸಿಂಗ್ ರೂಂಗೆ ತೆರಳಿದ ಬಳಿಕವೂ ಬುಮ್ರಾ ಅಸಮಾಧಾನ ಹೊರಹಾಕಿದ್ದರು. ಬುಮ್ರಾ ಆಕ್ರೋಶ ಅಭಿಮಾನಿಗಳಿಗೂ ಶಾಕ್ ತಂದಿತ್ತು.