ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ರಾಷ್ಟ್ರ ರಾಜಧಾನಿಯಲ್ಲಿ ಅಂತಿಮ ಮತ್ತು ನಿರ್ಣಾಯಕ ಏಕದಿನ ಪಂದ್ಯ ನಡೆಯಲಿದೆ.
ಸರಣಿ 2-2 ರಿಂದ ಸಮಬಲಗೊಂಡಿರುವ ಹಿನ್ನಲೆಯಲ್ಲಿ ಇಂದಿನ ಪಂದ್ಯಕ್ಕೆ ಫೈನಲ್ ಕಳೆ ಬಂದಿದೆ. ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದೀಗ ತವರು ನೆಲದಲ್ಲಿ ತಂಡದ ಮಾನ ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ತಂಡದಲ್ಲಿ ಎಂತಹದ್ದೇ ಬದಲಾವಣೆ ತಂಡದರೂ, ಬ್ಯಾಟಿಂಗ್ ನಲ್ಲಿ ದಿಡೀರ್ ಕುಸಿತ ಕಾಣುವುದು, ಬೌಲರ್ ಗಳು ತಕ್ಕ ಸಮಯದಲ್ಲೇ ಕೈಕೊಡುವುದು ಟೀಂ ಇಂಡಿಯಾಕ್ಕೆ ತಲೆಬಿಸಿ ತಂದಿಟ್ಟಿದೆ. ಇದರಿಂದಾಗಿ ಗೆಲ್ಲುವಂತಹ ಪಂದ್ಯಗಳನ್ನೇ ಸೋಲುತ್ತಿರುವುದು ವಿಪರ್ಯಾಸ.
ಕಳೆದ ಪಂದ್ಯದಲ್ಲಿ ಆರಂಭಿಕರು ಸಿಡಿದರೂ, ಮಧ್ಯಮ ಕ್ರಮಾಂಕ ಆಧರಿಸದೇ ತಂಡದ ಬ್ಯಾಟಿಂಗ್ ಹುಳುಕು ಬಯಲಾಗಿತ್ತು. ಹಾಗಿದ್ದರೂ ಮೊತ್ತವೇನೋ ಭರ್ಜರಿಯಾಗಿಯೇ ಪೇರಿಸಿತ್ತು. ಆದರೂ ಬೌಲಿಂಗ್ ಕೈಕೊಟ್ಟು ಎಲ್ಲವೂ ನೀರುಪಾಲಾಯ್ತು.
ವಿಶ್ವಕಪ್ ಗೆ ಇನ್ನು ಕೆಲವೇ ದಿನಗಳು ಬಾಕಿಯಿರುವ ಹಿನ್ನಲೆಯಲ್ಲಿ ಟೀಂ ಇಂಡಿಯಾದ ಈ ಕಳಪೆ ಫಾರ್ಮ್ ಚಿಂತೆಗೆ ಕಾರಣವಾಗಿದೆ. ಬೌಲಿಂಗ್ ನಲ್ಲಿ ಹಿಂದೆ ಇದ್ದ ಮೊನಚು ಈಗ ಕಾಣುತ್ತಿಲ್ಲ. ಬ್ಯಾಟಿಂಗ್ ನಲ್ಲೂ ಬಲವಿಲ್ಲದೇ ಟೀಂ ಇಂಡಿಯಾದ ಹುಳುಕು ಈಗ ವಿಶ್ವದ ಮುಂದೆ ಬಯಲಾಗಿದೆ. ಇದೆಲ್ಲವನ್ನೂ ಮೀರಿ ನಿಂತರೆ ಮಾತ್ರ ವಿಶ್ವಕಪ್ ಗೆ ಮೊದಲು ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಾಧ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ