ದುಬೈ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಮೊತ್ತ 192 ರನ್ ಗೇರಲು ಕಾರಣವಾಗಿದ್ದು ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್.
ಕೇವಲ 26 ಎಸೆತಗಳಲ್ಲಿ 68 ರನ್ ಚಚ್ಚಿದ ಸೂರ್ಯ ಭಾರತದ ಮೊತ್ತ ಬೃಹತ್ ಆಗಿ ಬೆಳೆಯಲು ಕಾರಣರಾದರು. ಅದರಲ್ಲೂ ಕೊನೆಯ ಓವರ್ ನಲ್ಲಿ ಸತತವಾಗಿ ನಾಲ್ಕು ಸಿಕ್ಸರ್ ಸಿಡಿಸಿದರು. ಒಂದು ವೇಳೆ ಎರಡು ಎಸೆತ ಮಿಸ್ ಆಗದೇ ಇದ್ದಿದ್ದರೆ ಆರೂ ಬಾಲ್ ಗಳನ್ನು ಸಿಕ್ಸರ್ ಗಟ್ಟುತ್ತಿದ್ದರು.
ಭಾರತದ ಇನಿಂಗ್ಸ್ ಮುಗಿಸಿ ಪೆವಿಲಿಯನ್ ಗೆ ಮರಳುವಾಗ ವಿರಾಟ್ ಕೊಹ್ಲಿ ಸೂರ್ಯಕುಮಾರ್ ಯಾದವ್ ಗೆ ಬಾಗಿ ನಮಸ್ಕರಿಸಿ ಅಭಿನಂದಿಸಿದರು. ಅಲ್ಲದೆ ಮೈದಾನದಲ್ಲಿದ್ದ ಪ್ರೇಕ್ಷಕರಿಗೂ ಸೂರ್ಯಕುಮಾರ್ ಗೆ ಚಿಯರ್ ಮಾಡುವಂತೆ ಕೇಳಿಕೊಂಡರು. ಕೊಹ್ಲಿಯಂತಹ ದಿಗ್ಗಜ ಬ್ಯಾಟಿಗನ ಈ ನಡೆಯಿಂದ ಸೂರ್ಯ ಕುಮಾರ್ ಖುಷಿ ಮೇರೆ ಮೀರಿತ್ತು. ಇಂತಹ ದೃಶ್ಯ ಹಿಂದೆಂದೂ ನೋಡಿರಲಿಲ್ಲ ಎಂದು ಸೂರ್ಯ ಭಾವುಕರಾಗಿ ಹೇಳಿಕೊಂಡಿದ್ದಾರೆ.
ಈ ಹಿಂದೆ ಐಪಿಎಲ್ ಪಂದ್ಯವೊಂದರಲ್ಲಿ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದಾಗ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಸೂರ್ಯರನ್ನು ಸ್ಲೆಡ್ಜಿಂಗ್ ಮಾಡಿದ್ದರು. ಅಂದು ಸೂರ್ಯ ಕೊಹ್ಲಿಯನ್ನು ಕ್ಯಾರೇ ಮಾಡದೆ ನಿಂತಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಅದೇ ಕೊಹ್ಲಿ ಸೂರ್ಯ ಇನಿಂಗ್ಸ್ ಗೆ ನಮಸ್ಕರಿಸಿದ್ದು ವಿಶೇಷವಾಗಿತ್ತು.