ಮುಂಬೈ: ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ತಮ್ಮ ಪತ್ನಿ, ಮಕ್ಕಳೊಂದಿಗೆ ಪ್ರೇಮಾನಂದ ಮಹಾರಾಜ್ ಬಾಬಾರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ವೃಂದಾವನದ ಪ್ರೇಮಾನಂದ ಮಹಾರಾಜ್ ಬಾಬ ಅವರ ಪರಮ ಭಕ್ತರು. ಪ್ರತೀ ವರ್ಷ ಕೊಹ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಕಳೆದ ವರ್ಷ ಅನುಷ್ಕಾ ಗರ್ಭಿಣಿಯಾಗಿದ್ದ ಕಾರಣಕ್ಕೆ ಮಿಸ್ ಮಾಡಿಕೊಂಡಿದ್ದರು.
ಆದರೆ ಇಂದು ಕೊಹ್ಲಿ, ಅನುಷ್ಕಾ ತಮ್ಮ ಪುತ್ರಿ ವಮಿಕಾ ಮತ್ತು ಪುತ್ರ ಅಕಾಯ್ ನನ್ನು ಕರೆದುಕೊಂಡು ಆಶ್ರಮಕ್ಕೆ ಬಂದಿದ್ದಾರೆ. ಈ ವೇಳೆ ಬಾಬ ಬಳಿ ಮಾತನಾಡಿರುವ ಅನುಷ್ಕಾ ಪ್ರತೀ ಬಾರಿ ನಿಮ್ಮ ಬಳಿ ಬರುವಾಗ ಏನೋ ಪ್ರಶ್ನೆಗಳನ್ನು ಕೇಳಬೇಕು ಎಂದು ಬರುತ್ತೇನೆ. ಆದರೆ ಆಗ ಅದನ್ನು ಬೇರೆ ಯಾರೋ ಕೇಳಿರುತ್ತಾರೆ. ಈ ಬಾರಿಯೂ ಹಲವು ಪ್ರಶ್ನೆಗಳನ್ನು ಮನದಲ್ಲಿ ಅಂದುಕೊಂಡೇ ಬಂದಿದ್ದೆ. ಆದರೆ ಈಗ ನನಗೆ ನಿಮ್ಮ ಆಶೀರ್ವಾದವೊಂದೇ ಸಾಕು ಎಂದು ಅನುಷ್ಕಾ ಮತ್ತು ಕೊಹ್ಲಿ ಬಾಬಗೆ ನಮಸ್ಕರಿಸಿದ್ದಾರೆ.