Publish Date: Sat, 07 Mar 2026 (11:24 IST)
Updated Date: Sat, 07 Mar 2026 (11:29 IST)
ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗರು ಹೆಸರು ಕೀರ್ತಿ ಬಂದ ಮೇಲೆ ತಮ್ಮ ತವರು ಬಿಟ್ಟು ಮುಂಬೈಯಲ್ಲಿ ಸೆಟಲ್ ಆಗುತ್ತಾರೆ. ಆದರೆ ಮಹೇಂದ್ರ ಸಿಂಗ್ ಧೋನಿ ಮಾತ್ರ ಅಂದೂ ಇಂದೂ ಯಾವತ್ತೂ ರಾಂಚಿಯಲ್ಲೇ ಇದ್ದಾರೆ. ಇದಕ್ಕೆ ಕಾರಣವೇನು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದು, ಮಹಿ ನೋಡಿ ಕಲಿಯಿರಿ ಎಂದು ಕೆಲವರು ವಿರಾಟ್ ಕೊಹ್ಲಿಗೆ ಟಾಂಗ್ ಕೊಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಧೋನಿಗೆ ನೀವು ಯಾಕೆ ರಾಂಚಿಯಿಂದ ಬೇರೆ ಊರಿಗೆ ಶಿಫ್ಟ್ ಆಗಿಲ್ಲ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು ನನಗೆ ರಾಂಚಿ ತುಂಬಾ ಇಷ್ಟ. ನನಗೆ ಇಲ್ಲಿ ಬಾಲ್ಯದಿಂದ ಸಾಕಷ್ಟು ನೆನಪುಗಳಿವೆ. ನನಗೆ ಈ ನಗರ ತುಂಬಾ ಪರಿಚಯ. ಅಲ್ಲದೆ ಜಾರ್ಖಂಡ್ ಹೊಸ ರಾಜ್ಯವಾಗಿ ರೂಪುಗೊಂಡಾಗ, ರಾಂಚಿ ರಾಜಧಾನಿಯಾದಾಗ ಇವೆಲ್ಲವನ್ನೂ ನಾವು ನೋಡಿದ್ದೇವೆ. ಇಲ್ಲಿಂದ ನನಗೆ ಶಿಫ್ಟ್ ಆಗಲು ಸರಿಯಾದ ಕಾರಣಗಳಿರಲಿಲ್ಲ. ನನಗೆ ಇಲ್ಲಿನ ಏರ್ ಪೋರ್ಟ್ ನಲ್ಲಿ ಬಂದಿಳಿದಾಗ ನನ್ನ ಮನೆಗೇ ಬಂದಿಳಿದ ಅನುಭವ ಕೊಡುತ್ತದೆ. ನನಗೆ ಇಲ್ಲಿ ಎಲ್ಲವೂ ಸಿಗುವಾಗ ಬೇರೆ ಕಡೆ ಶಿಫ್ಟ್ ಆಗಬೇಕು ಎನಿಸಲಿಲ್ಲ. ನನಗೆ ಯಾವತ್ತೂ ಮೆಟ್ರೋದಲ್ಲಿ ಪ್ರಯಾಣ ಮಾಡುವುದು ಅಗತ್ಯ ಎನಿಸಲಿಲ್ಲ. ಅವಕಾಶದ ಕೊರತೆಯಿದ್ದರೆ ಬೇರೆ ಕತೆ. ಆದರೆ ನನಗೆ ಯಾವತ್ತೂ ಇಲ್ಲಿ ಅನಿಸಲಿಲ್ಲ. ನಾನು ಒಂದು ಸಣ್ಣ ಹಳ್ಳಿಯಿಂದ ಬಂದವನು. ಹೀಗಾಗಿ ನನಗೆ ಎಲ್ಲವನ್ನೂ ಎದುರಿಸುವ ಸಾಮರ್ಥ್ಯವಿದೆ ಎಂದಿದ್ದಾರೆ.
ಅವರ ಈ ಉತ್ತರ ನೆಟ್ಟಿಗರಿಗೆ ಭಾರೀ ಇಷ್ಟವಾಗಿದೆ. ನಿಜವಾಗಿ ಮನುಷ್ಯ ಎಷ್ಟೇ ಬೆಳೆದರೂ ತನ್ನ ಊರನ್ನು ಬಿಡಲ್ಲ ಎನ್ನುವುದು ವಿಶೇಷ ಎಂದಿದ್ದಾರೆ. ಇನ್ನು ಕೆಲವರು ಇದೀಗ ಫ್ಯಾಮಿಲಿ ಸಮೇತ ಲಂಡನ್ ಗೆ ಶಿಫ್ಟ್ ಆಗಿರುವ ವಿರಾಟ್ ಕೊಹ್ಲಿಗೆ ಹೋಲಿಸಿ ಟಾಂಗ್ ಕೊಟ್ಟಿದ್ದಾರೆ. ಮಹಿ ನೋಡಿ ಕಲಿಯಿರಿ ಎಂದು ಕೊಹ್ಲಿಗೆ ಟಾಂಗ್ ಕೊಟ್ಟಿದ್ದಾರೆ.