ಆಂಟಿಗ್ವಾ: ಪ್ರಬಲ ಆಸ್ಟ್ರೇಲಿಯಾ ತಂಡವನ್ನು 96 ರನ್ ಗಳಿಂದ ಭರ್ಜರಿಯಾಗಿ ಸೋಲಿಸಿ ಭಾರತ ಅಂಡರ್ 19 ಕ್ರಿಕೆಟ್ ತಂಡ ವಿಶ್ವಕಪ್ ಫೈನಲ್ ತಲುಪಿದೆ. ಈ ಮೂಲಕ ಸತತ ನಾಲ್ಕನೇ ಬಾರಿಗೆ ಫೈನಲ್ ತಲುಪಿದ ಸಾಧನೆ ಮಾಡಿದೆ.
ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಹುಡುಗರು 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 290 ರನ್ ಗಳಿಸಿದರು. ನಾಯಕ ಯಶ್ ಧುಲ್ ಭರ್ಜರಿ ಶತಕ (110 ರನ್) ಗಳಿಸಿ ಮಿಂಚಿದರೆ ಅವರಿಗೆ ತಕ್ಕ ಸಾಥ್ ನೀಡಿದ ಶೇಖ್ ರಶೀದ್ 94 ರನ್ ಗಳಿಗೆ ಔಟಾದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯನ್ನರು 41.5 ಓವರ್ ಗಳಲ್ಲಿ 194 ರನ್ ಗಳಿಗೆ ಆಲೌಟ್ ಆದರು. ಭಾರತದ ಪರ ವಿಕ್ಕಿ ಓಸ್ಟ್ವಾಲ್ 3, ರವಿಕುಮಾರ್, ನಿಶಾಂತ್ ಸಿಂಧು ತಲಾ 2, ಕೌಶಾಲ್ ತಾಂಬೆ, ರಘುವಂಶಿ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು. ಇನ್ನೀಗ ಭಾರತ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ.