ಮುಂಬೈ: ಟೀಂ ಇಂಡಿಯಾ ದಕ್ಷಿಣಾ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ತೆರಳಿದೆ. ಆದರೆ ಈ ಪ್ರವಾಸ ವಿಶೇಷವಾಗಿ ಮೂವರು ಕ್ರಿಕೆಟಿಗರ ಪಾಲಿಗೆ ಮಹತ್ವದ್ದಾಗಿದೆ. ಆ ಮೂವರು ಯಾರು ಗೊತ್ತಾ?
ಅಜಿಂಕ್ಯಾ ರೆಹಾನೆ: ಟೆಸ್ಟ್ ತಂಡದ ಉಪ ನಾಯಕನಾಗಿದ್ದ ರೆಹಾನೆ ಈಗ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದು, ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದೇ ಅವರ ಹಿಂದಿನ ಅನುಭವದ ಕಾರಣದಿಂದ. ಅವರನ್ನು ಡ್ರಾಪ್ ಮಾಡಬೇಕೆಂದು ಭಾರೀ ಒತ್ತಡ ಕೇಳಿಬರುತ್ತಿದೆ. ಹಾಗಿದ್ದರೂ ಕೊಹ್ಲಿ, ಕೋಚ್ ದ್ರಾವಿಡ್ ಬೆಂಬಲದಿಂದ ತಂಡದಲ್ಲಿ ಸ್ಥಾನ ಸಿಕ್ಕಿದೆ. ಈ ಅವಕಾಶವನ್ನು ಅವರು ಬಳಸಿಕೊಳ್ಳದೇ ಇದ್ದರೆ ಆಯ್ಕೆ ಸಮಿತಿ ಮುಂದಿನ ಪಂದ್ಯಕ್ಕೆ ಕೊಕ್ ನೀಡುವುದು ಖಂಡಿತಾ.
ಚೇತೇಶ್ವರ ಪೂಜಾರ: ರೆಹಾನೆಯಂತೆ ಪೂಜಾರ ಕೂಡಾ ಟೆಸ್ಟ್ ಸ್ಪೆಷಲಿಸ್ಟ್. ವಿಪರ್ಯಾಸವೆಂದರೆ ಅವರಂತೇ ಸತತವಾಗಿ ವೈಫಲ್ಯ ಅನುಭವಿಸಿದ್ದಾರೆ. ಅವರನ್ನೂ ಕೈಬಿಡಬೇಕೆಂಬ ಒತ್ತಡ ಕೇಳಿಬರುತ್ತಿತ್ತು. ಆದರೆ ರೋಹಿತ್, ಶುಬ್ನಂ ಗಿಲ್ ಮುಂತಾದ ಆಟಗಾರರ ಅನುಪಸ್ಥಿತಿಯಲ್ಲಿ ಪೂಜಾರಗೆ ಆಫ್ರಿಕಾದಲ್ಲಿ ಅವಕಾಶ ಸಿಗಬಹುದು. ಆದರೆ ಇಲ್ಲೂ ಪ್ರದರ್ಶನ ನೀಡದೇ ಇದ್ದರೆ, ಶ್ರೇಯಸ್ ಐಯರ್ ಮಿಂಚಿದರೆ ಮುಂದೆ ಸ್ಥಾನ ಸಿಗುವುದು ಕಷ್ಟ.
ಇಶಾಂತ್ ಶರ್ಮಾ: ಟೀಂ ಇಂಡಿಯಾದ ಅನುಭವಿ ವೇಗಿ, 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಇಶಾಂತ್ ಶರ್ಮಾ ದಾಳಿಯಲ್ಲಿ ಮೊದಲಿನಂತೆ ಮೊನಚು ಕಂಡುಬರುತ್ತಿಲ್ಲ. ಹಾಗಿದ್ದರೂ ಅನುಭವಿ ಆಟಗಾರ ವಿದೇಶದಲ್ಲಿ ಮಿಂಚಿದರೂ ಅಚ್ಚರಿಯಿಲ್ಲ. ಒಂದು ವೇಳೆ ಫಾರ್ಮ್ ಕಂಡುಕೊಳ್ಳದೇ ಹೋದರೆ ಮುಂದೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ.