ಮುಂಬೈ: ಇಂಗ್ಲೆಂಡ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ನಿರೀಕ್ಷೆಯಂತೇ ರವೀಂದ್ರ ಜಡೇಜಾ ಕಮ್ ಬ್ಯಾಕ್ ಮಾಡಿದ್ದಾರೆ.
ರವೀಂದ್ರ ಜಡೇಜಾ ಫಿಟ್ನೆಸ್ ವರದಿಗಾಗಿ ಟೀಂ ಇಂಡಿಯಾ ಆಯ್ಕೆ ಇಷ್ಟು ತಡವಾಗಿತ್ತು. ಮೊನ್ನೆಯಷ್ಟೇ ತಾವು ಸುಧಾರಿಸುತ್ತಿರುವುದಾಗಿ ಜಡೇಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಇದೀಗ ಅವರು ಚೇತರಿಸಿಕೊಂಡಿರುವುದರಿಂದ ತಂಡಕ್ಕೆ ಮರಳಿದ್ದಾರೆ. ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ಶುಬ್ಮನ್ ಗಿಲ್ ಕೂಡಾ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಕೆಎಲ್ ರಾಹುಲ್ ಕಮ್ ಬ್ಯಾಕ್
ತೊಡೆ ನೋವಿನಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಪ್ರಮುಖ ಬ್ಯಾಟಿಗ ಕೆಎಲ್ ರಾಹುಲ್ ತಂಡಕ್ಕೆ ಮರಳಿದ್ದಾರೆ. ಮೊದಲ ಟೆಸ್ಟ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಅವರು ದ್ವಿತೀಯ ಟೆಸ್ಟ್ ನಿಂದ ಹೊರಗುಳಿದಿದ್ದರು. ಕೊಹ್ಲಿ ತಮ್ಮನ್ನು ಆಯ್ಕೆಗೆ ಪರಿಗಣಿಸದಂತೆ ಮನವಿ ಮಾಡಿದ್ದರು. ಇನ್ನು ಗಾಯಗೊಂಡಿರುವ ಶ್ರೇಯಸ್ ಅಯ್ಯರ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಆದರೆ ರಾಹುಲ್ ಕಮ್ ಬ್ಯಾಕ್ ಮಾಡಿರುವುದು ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.
ಈ ಸರಣಿಯಲ್ಲಿ ಕೆಎಸ್ ಭರತ್ ಫಾರ್ಮ್ ಭಾರೀ ಟೀಕೆಗೊಳಗಾಗಿತ್ತು. ಹಾಗಿದ್ದರೂ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಅವರ ಜೊತೆಗೆ ಯುವ ವಿಕೆಟ್ ಕೀಪರ್ ಧ್ರುವ ಜ್ಯುರೆಲ್ ಕೂಡಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೇಗದ ಬೌಲಿಂಗ್ ನಲ್ಲಿ ಜಸ್ಪ್ರೀತ್ ಬುಮ್ರಾ ಜೊತೆಗೆ ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಅರ್ಷ್ ದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ.
ಉಳಿದಂತೆ ತಂಡ ಇಂತಿದೆ:
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ರಜತ್ ಪಟಿದಾರ್, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ಧ್ರುವ ಜ್ಯುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.