ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆರ್ ಸಿಬಿ ವರ್ಸಸ್ ಯುಪಿ ವಾರಿಯರ್ಸ್ ನಡುವಿನ ಪಂದ್ಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ಪಂದ್ಯ ಸೂಪರ್ ಓವರ್ ವರೆಗೆ ಹೋಗಿತ್ತು. ಆದರೆ ನಾಯಕಿ ಸ್ಮೃತಿ ಮಂಧನಾ ನಿರೀಕ್ಷಿಸಿದಂತೆ ರನ್ ಗಳಿಸಲಾಗದೇ ಆರ್ ಸಿಬಿ ಸೋತು ಹೋಯಿತು.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಎಲ್ಲಿಸ್ ಪೆರ್ರಿ 90 ರನ್, ಡ್ಯಾನಿಯಲ್ ವ್ಯಾಟ್ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಯುಪಿ ಮತ್ತೆ ಕೊನೆಯ ಓವರ್ ಗಳಲ್ಲಿ ಬಿಗುವಿನ ದಾಳಿ ನಡೆಸದೇ ಟೈ ಆಯಿತು. ಯುಪಿ ಕೂಡಾ 20 ಓವರ್ ಗಳಲ್ಲಿ 180 ರನ್ ಗಳಿಗೇ ಆಲೌಟ್ ಆಯಿತು. ಇದರಿಂದ ಪಂದ್ಯ ಟೈ ಆಯಿತು. ಕೊನೆಯ ಓವರ್ ನಲ್ಲಿ ಯುಪಿಗೆ 18 ರನ್ ಬೇಕಾಗಿತ್ತು. ಎಕಲ್ ಸ್ಟೋನ್ 17 ರನ್ ಚಚ್ಚಿದರು. ಆದರೆ ಕೊನೆಯ ಎಸೆತದಲ್ಲಿ ಧೋನಿ ರೀತಿ ವಿಕೆಟ್ ಕೀಪರ್ ರಿಚಾ ಘೋಷ್ ಮಿಂಚಿನಂತೆ ಅವರನ್ನು ರನೌಟ್ ಮಾಡಿದರು. ಇದರಿಂದ ಪಂದ್ಯ ಟೈ ಆಯಿತು.
ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಪಿ 8 ರನ್ ಗಳಿಸಿತು. ಈ ಸುಲಭ ಗುರಿಯನ್ನು ಬೆನ್ನತ್ತುವಲ್ಲಿ ಆರ್ ಸಿಬಿ ಎಡವಿತು. ಆರ್ ಸಿಬಿ ಪರ ಸ್ಮೃತಿ ಮಂಧನಾ ಮತ್ತು ರಿಚಾ ಘೋಷ್ ಬ್ಯಾಟಿಂಗ್ ಗೆ ಬಂದರು. ಮೊದಲ ಎಸೆತದದಲ್ಲಿ ರಿಚಾ ರನ್ ಗಳಿಸಲು ವಿಫಲರಾದರು. ಎರಡನೇ ಎಸೆತದಲ್ಲಿ ರಿಚಾ 1 ರನ್ ಗಳಿಸಿದರು. ಈಗ ಸ್ಟ್ರೈಕ್ ಸ್ಮೃತಿ ಪಾಲಾಯಿತು. ಮೂರನೇ ಬಾಲ್ ಗೆ ಸ್ಮೃತಿ ಕೂಡಾ ರನ್ ಗಳಿಸಲಿಲ್ಲ. ಉಳಿದ ಮೂರು ಬಾಲ್ ಗಳಲ್ಲಿ ಸ್ಮೃತಿ ಮತ್ತು ರಿಚಾ ತಲಾ ಸಿಂಗಲ್ಸ್ ತೆಗೆಯಲಷ್ಟೇ ಶಕ್ತರಾದರು. ಇದರಿಂದ ಆರ್ ಸಿಬಿ ಪಂದ್ಯ ಸೋತಿತು. ಇದರೊಂದಿಗೆ ಆರ್ ಸಿಬಿ ಸತತ ಎರಡನೇ ಸೋಲು ಅನುಭವಿಸುವಂತಾಯಿತು.