ದುಬೈ: ಟಿ20 ವಿಶ್ವಕಪ್ ನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಭರ್ಜರಿ 7 ವಿಕೆಟ್ ಗಳ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಭಾರತದ ಪರ ವೇಗಿ ಮೊಹಮ್ಮದ್ ಶಮಿ ಬೆನ್ನು ಬೆನ್ನಿಗೆ ವಿಕೆಟ್ ಕಬಳಿಸಿ ಇಂಗ್ಲೆಂಡ್ ಓಟಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ ಅವರು ಮೂರು ವಿಕೆಟ್ ತಮ್ಮದಾಗಿಸಿಕೊಂಡರು. ಅವರ ಹೊರತಾಗಿ ರಾಹುಲ್ ಚಹರ್, ಬುಮ್ರಾ ತಲಾ 1 ವಿಕೆಟ್ ಪಡೆದರು.
ಈ ಮೊತ್ತವನ್ನು ಬೆನ್ನತ್ತಲು ಟೀಂ ಇಂಡಿಯಾಗೆ ಆರಂಭಿಕರು ಉತ್ತಮ ಅಡಿಪಾಯ ಹಾಕಿಕೊಟ್ಟರು. ಅಚ್ಚರಿಯೆಂಬಂತೆ ನಿನ್ನೆಯ ಪಂದ್ಯದಲ್ಲಿ ಕೆಎಲ್ ರಾಹುಲ್-ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ರೋಹಿತ್ ಶರ್ಮಾ ನಿನ್ನೆಯ ಪಂದ್ಯದಿಂದ ಹೊರಗುಳಿದಿದ್ದರು. ರಾಹುಲ್ 46 ಎಸೆತಗಳಿಂದ 70, ಇಶಾನ್ 24 ಎಸೆತಗಳಿಂದ 51 ರನ್ ಗಳಿಸಿ ಮಿಂಚಿದರು. ವಿರಾಟ್ ಕೊಹ್ಲಿ (11), ಸೂರ್ಯಕುಮಾರ್ ಯಾದವ್ (8) ವಿಫಲರಾದರೂ ರಿಷಬ್ ಪಂತ್ ಅಜೇಯ 29 ರನ್ ಮತ್ತು ಹಾರ್ದಿಕ್ ಪಾಂಡ್ಯ ಅಜೇಯ 12 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು. ಟೀಂ ಇಂಡಿಯಾ ಅಂತಿಮವಾಗಿ 19 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು.