ಸೈಂಟ್ ಲೂಸಿಯಾ: ಟಿ20 ವಿಶ್ವಕಪ್ ನಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಮಳೆಯಾಗುವ ಮುನ್ಸೂಚನೆಯಿದೆ. ಈ ಪಂದ್ಯಕ್ಕೆ ಮಳೆ ಬಂದರೆ ಯಾವ ತಂಡಕ್ಕೆ ಲಾಭ, ಯಾವ ತಂಡಕ್ಕೆ ನಷ್ಟ ಎಂಬ ಲೆಕ್ಕಾಚಾರ ಇಲ್ಲಿದೆ ನೋಡಿ.
ಟೀಂ ಇಂಡಿಯಾ ಗುಂಪು 1 ರಲ್ಲಿ ಎರಡು ಸೂಪರ್ 8 ಪಂದ್ಯಗಳ ಪೈಕಿ ಎರಡನ್ನೂ ಗೆದ್ದು ಅಗ್ರ ಸ್ಥಾನದಲ್ಲಿದೆ. ಒಟ್ಟು 4 ಅಂಕ ಕಲೆ ಹಾಕಿರುವ ಟೀಂ ಇಂಡಿಯಾ ನೆಟ್ ರನ್ ರೇಟ್ ಕೂಡಾ ಪ್ಲಸ್ 2.425 ರಷ್ಟಿದೆ. ಇದರಿಂದಾಗಿ ಭಾರತ ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿದೆ.
ಆದರೆ ಆಸ್ಟ್ರೇಲಿಯಾಕ್ಕೆ ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸಿಕ್ಕ ಸೋಲು ಭಾರೀ ನಷ್ಟವುಂಟು ಮಾಡಿದೆ. ಒಟ್ಟು 2 ಪಂದ್ಯಗಳಿಂದ 1 ಗೆಲುವು ಕಂಡಿರುವ ಆಸ್ಟ್ರೇಲಿಯಾ 2 ಅಂಕ ಮತ್ತು ಪ್ಲಸ್ 0.223 ನೆಟ್ ರನ್ ರೇಟ್ ಹೊಂದಿದೆ. ಇತ್ತ ಅಫ್ಘಾನಿಸ್ತಾನ ಕೂಡಾ ನೆಟ್ ರನ್ ರೇಟ್ ನಲ್ಲಿ ಆಸೀಸ್ ಗಿಂತ ಹಿಂದಿದ್ದರೂ ಒಟ್ಟು ಅಂಕ 2 ಸಂಪಾದಿಸಿಕೊಂಡಿದೆ. ಅಲ್ಲದೆ ಅಫ್ಘಾನಿಸ್ತಾನಕ್ಕೆ ಬಾಂಗ್ಲಾದೇಶ ವಿರುದ್ಧ ಇನ್ನೊಂದು ಸೂಪರ್ 8 ಪಂದ್ಯವಿದ್ದು ಅಲ್ಲಿ ಗೆದ್ದರೆ ಸೆಮಿಫೈನಲ್ ಗೇರಬಹುದಾಗಿದೆ.
ಒಂದು ವೇಳೆ ಇಂದಿನ ಭಾರತ ಮತ್ತು ಆಸೀಸ್ ಪಂದ್ಯಕ್ಕೆ ಮಳೆ ಬಂದು ಪಂದ್ಯ ರದ್ದಾದರೆ ಎರಡೂ ತಂಡಗಳಿಗೆ ತಲಾ 1 ಅಂಕ ಹಂಚಿಕೆಯಾಗಲಿದೆ. ಆಗ ಆಸ್ಟ್ರೇಲಿಯಾ ಮೂರು ಪಂದ್ಯಗಳಿಂದ ಮೂರು ಆಂಕ ಗಳಿಸಿದಂತಾಗುತ್ತಷ್ಟೇ. ಆದರೆ ಭಾರತ 5 ಅಂಕ ಪಡೆದು ಸುಲಭವಾಗಿ ಸೆಮಿಫೈನಲ್ ಪ್ರವೇಶಿಸುತ್ತದೆ. ಒಂದು ವೇಳೆ ಆಸೀಸ್ ಗೆ ಸೆಮಿಫೈನಲ್ ಗೇರಬೇಕೆಂದರೆ ಆಗ ಮುಂದಿನ ಬಾಂಗ್ಲಾದೇಶ-ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಸೋಲಬೇಕಾಗುತ್ತದೆ. ಒಂದು ವೇಳೆ ಆ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರೆ ಆಸೀಸ್ ಟೂರ್ನಿಯಿಂದಲೇ ಹೊರನಡೆಯಬೇಕಾಗುತ್ತದೆ. ಒಂದು ವೇಳೆ ಇಂದು ಪಂದ್ಯ ನಡೆದು ಆಸ್ಟ್ರೇಲಿಯಾ ಸೋತರೆ ಆಗಲೂ ಆಸ್ಟ್ರೇಲಿಯಾ ಸೆಮಿಫೈನಲ್ ಹಾದಿ ಬಂದ್ ಆಗಲಿದೆ.