ಕಿಂಗ್ಸ್ ಟೌನ್: ಟಿ20 ವಿಶ್ವಕಪ್ ನ ಕೊನೆಯ ಸೂಪರ್ 8 ಪಂದ್ಯದಲ್ಲಿ ರೋಚಕವಾಗಿ 8 ರನ್ ಗಳಿಂದ ಗೆಲುವು ಸಾಧಿಸಿದ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶ ಜೊತೆಗೆ ದೈತ್ಯ ಆಸ್ಟ್ರೇಲಿಯಾವನ್ನು ಟೂರ್ನಿಯಿಂದಲೇ ಹೊರದಬ್ಬಿದೆ. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಸೆಮಿಫೈನಲ್ ಗೇರಿದೆ.
ಇಂದಿನ ಪಂದ್ಯದ ಫಲಿತಾಂಶ ಆಸ್ಟ್ರೇಲಿಯಾಕ್ಕೂ ಮುಖ್ಯವಾಗಿತ್ತು. ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋತಿದ್ದ ಆಸ್ಟ್ರೇಲಿಯಾಗೆ ಇಂದು ಅಫ್ಘಾನಿಸ್ತಾನ ಸೋತರೆ ಮಾತ್ರ ಸೆಮಿಫೈನಲ್ ಗೇರುವ ಅವಕಾಶವಿತ್ತು. ಆದರೆ ಇಂದು ಅಫ್ಘಾನಿಸ್ತಾನ ಗೆದ್ದು ಬಾಂಗ್ಲಾ ಜೊತೆಗೆ ಆಸ್ಟ್ರೇಲಿಯಾವನ್ನೂ ಸೆಮಿಫೈನಲ್ ನಿಂದ ಹೊರದಬ್ಬಿತು.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು. ಮಳೆಯಿಂದಾಗಿ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯವನ್ನು 19 ಓವರ್ ಗಳಿಗೆ ಕಡಿತ ಮಾಡಲಾಯಿತು. 19 ಓವರ್ ಗಳಲ್ಲಿ ಅಫ್ಘಾನಿಸ್ತಾನ 114 ಗಳಿಸಬೇಕಾಗಿತ್ತು.
ಆದರೆ ಅಫ್ಘಾನಿಸ್ತಾನ ಬೌಲರ್ ಗಳು ಮತ್ತೊಮ್ಮೆ ಪಾರಮ್ಯ ಮೆರೆದರು. ತೀವ್ರ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಕೊನೆಯ 12 ಬಾಲ್ ಗಳಿಂದ 12 ರನ್ ಗಳಿಸಬೇಕಿತ್ತು. ಈ ಹಂತದಲ್ಲಿ ತಂಡ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಲಿಟನ್ ದಾಸ್ 52 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಅವರು ತಂಡವನ್ನು ಗೆಲುವಿನ ದಡ ಮುಟ್ಟಿಸಿಯೇ ಬಿಡಬಹುದು ಎಂದು ಎಲ್ಲರ ನಿರೀಕ್ಷೆಯಾಗಿತ್ತು.
ಆದರೆ ಅಫ್ಘಾನ್ ಗೆ ಆಪತ್ ಬಾಂಧವರಾಗಿ ಬಂದಿದ್ದು ನವೀನ್ ಉಲ್ ಹಕ್. ಮೊದಲ ಮೂರು ಎಸೆತಗಳಲ್ಲಿ ಸಿಂಗಲ್ಸ್ ಬಂತು. ಮೂರನೇ ಎಸೆತದಲ್ಲಿ ಕ್ಯಾಚ್ ಡ್ರಾಪ್ ಕೂಡಾ ಆಗಿತ್ತು. ಆದರೆ ನಾಲ್ಕನೇ ಎಸೆತದಲ್ಲಿ ತಸ್ಕೀನ್ ಅಹಮ್ಮದ್ ರನ್ನು ನವೀನ್ ಬೌಲ್ಡ್ ಔಟ್ ಮಾಡಿದರು. ಮುಂದಿನ ಎಸೆತದಲ್ಲಿ ಹೊಸ ಬ್ಯಾಟಿಗ ಮುಸ್ತಾಫಿಝುರ್ ರನ್ನು ಎಲ್ ಬಿ ಬಲೆಗೆ ಬೀಳಿಸಿದ ನವೀನ್ ತಂಡಕ್ಕೆ ರೋಚಕ ಗೆಲುವು ಕೊಡಿಸಿದರು. ಅಂತಿಮವಾಗಿ ಬಾಂಗ್ಲಾದೇಶ 17.5 ಓವರ್ ಗಳಲ್ಲಿ 105 ರನ್ ಗಳಿಗೆ ಆಲೌಟ್ ಆಯಿತು.