ಮೆಲ್ಬೋರ್ನ್: ಟಿ20 ವಿಶ್ವಕಪ್ ನ ಕೊನೆಯ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆಯನ್ನು 71 ರನ್ ಗಳಿಂದ ಸೋಲಿಸಿದ ಟೀಂ ಇಂಡಿಯಾ ಸೆಮಿಫೈನಲ್ ಗೇರಿದೆ.
ಗುಂಪು ಬಿ ಯಲ್ಲಿ ಭಾರತ ಒಟ್ಟು 8 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ 15 ರನ್ ಗಳಿಗೆ ಔಟಾಗುವ ಮೂಲಕ ಮತ್ತೆ ಕಳಪೆ ಫಾರ್ಮ್ ಮುಂದುವರಿಸಿದರು. ಆದರೆ ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಕೆಎಲ್ ರಾಹುಲ್ ಇಂದೂ ಕೂಡಾ ಬರೋಬ್ಬರಿ 50 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ ವಿರಾಟ್ ಕೊಹ್ಲಿ ಕೆಲ ಹೊತ್ತು ಆಡಿದರೂ 26 ರನ್ ಗೆ ಔಟಾದರು. ಆದರೆ ಭಾರತಕ್ಕೆ ಮತ್ತೆ ಆಸರೆಯಾಗಿದ್ದು ಸೂರ್ಯಕುಮಾರ್ ಯಾದವ್. ಕೇವಲ 25 ಎಸೆತಗಳಿಂದ ಅಜೇಯ 61 ರನ್ ಗಳಿಸಿದ ಸೂರ್ಯ ಭಾರತ ಉತ್ತಮ ಮೊತ್ತ ಪೇರಿಸಲು ಕಾರಣರಾದರು. ರಿಷಬ್ ಪಂತ್ ಅವಕಾಶ ಪಡೆದರೂ 3 ರನ್ ಗೇ ಪೆವಿಲಿಯನ್ ಗೆ ಸಾಗಿದರು.
ಸಹಜವಾಗಿಯೇ ಬೃಹತ್ ಮೊತ್ತ ಬೆನ್ನತ್ತಲು ಹೊರಟ ಜಿಂಬಾಬ್ವೆ ಭಾರತದ ಬೌಲಿಂಗ್ ದಾಳಿಯೆದುರು ಥರಗುಟ್ಟಿತು. ಸಿಕಂದರ್ ರಾಜಾ 34, ರ್ಯಾನ್ ಬರ್ಲ್ 35 ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದರು. ಭಾರತದ ಪರ ರವಿಚಂದ್ರನ್ ಅಶ್ವಿನ್ 3, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ತಲಾ 2, ಭುವನೇಶ್ವರ್ ಕುಮಾರ್, ಅರ್ಷ್ ದೀಪ್ ಸಿಂಗ್, ಅಕ್ಸರ್ ಪಟೇಲ್ ಒಂದೊಂದು ವಿಕೆಟ್ ತಮ್ಮದಾಗಿಸಿಕೊಂಡರು. ಅಂತಿಮವಾಗಿ ಜಿಂಬಾಬ್ವೆ 17.2 ಓವರ್ ಗಳಲ್ಲಿ 115 ರನ್ ಗಳಿಗೆ ಆಲೌಟ್ ಆಯಿತು.
-Edited by Rajesh Patil