Publish Date: Sun, 08 Mar 2026 (20:44 IST)
Updated Date: Sun, 08 Mar 2026 (20:46 IST)
ಅಹ್ಮದಾಬಾದ್: ಟಿ20 ವಿಶ್ವಕಪ್ ಫೈನಲ್ ಪಂದ್ಯ ಗೆಲ್ಲಲು ನ್ಯೂಜಿಲೆಂಡ್ ಗೆ ಟೀಂ ಇಂಡಿಯಾ 256 ರನ್ ಗಳ ಗೆಲುವಿನ ಗುರಿ ನೀಡಿದೆ. ಮತ್ತೆ ಮಿಂಚಿದ ಸಂಜು ಸ್ಯಾಮ್ಸನ್ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಲು ನೆರವಾದರು.
ಇಂದು ಟಾಸ್ ಗೆದ್ದು ನ್ಯೂಜಿಲೆಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭಿಕ ಎರಡು ಓವರ್ ಗಳಲ್ಲಿ ಎಚ್ಚರಿಕೆಯ ಆಟವಾಡಿದ ಟೀಂ ಇಂಡಿಯಾ ಆರಂಭಿಕರು ಬಳಿಕ ಹೊಡೆತಕ್ಕೆ ಕೈಹಾಕಿದರು. ವಿಶೇಷವೆಂದರೆ ಇಷ್ಟು ದಿನ ಔಟ್ ಆಫ್ ಫಾರ್ಮ್ ನಲ್ಲಿದ್ದ ಅಭಿಷೇಕ್ ಶರ್ಮಾ ಇಂದು ಫಾರ್ಮ್ ಗೆ ಮರಳಿದರು. ಇಂದು 21 ಎಸೆತ ಎದುರಿಸಿದ ಅವರು 52 ರನ್ ಗಳಿಸಿ ಔಟಾದರು. ಇನ್ನೊಂದೆಡೆ ಸಂಜು ಸ್ಯಾಮ್ಸನ್ ಸತತ ಮೂರನೇ ಪಂದ್ಯದಲ್ಲೂ ಅಬ್ಬರದ ಬ್ಯಾಟಿಂಗ್ ನಡೆಸಿದರು. ಒಟ್ಟು 46 ಎಸೆತಗಳಿಂದ 89 ರನ್ ಗಳಿಸಿ ಔಟಾದರು. ವಿಶೇಷವೆಂದರೆ ಸೆಮಿಫೈನಲ್ ನಲ್ಲೂ ಸಂಜು ಇದೇ ಮೊತ್ತಕ್ಕೆ ಔಟಾಗಿದ್ದರು.
ಇಶಾನ್ ಕಿಶನ್ ಕೂಡಾ ತಮಗೆ ಸಿಕ್ಕ ಪಾತ್ರವನ್ನು ಚೆನ್ನಾಗಿಯೇ ನಿಭಾಯಿಸಿದರು. 25 ಎಸೆತ ಎದುರಿಸಿದ ಅವರು 54 ರನ್ ಗಳಿಸಿ ಔಟಾದರು. ಇಂದು ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಸೂರ್ಯ ಶೂನ್ಯ ಸುತ್ತಿದರೆ ಹಾರ್ದಕ್ 18 ರನ್ ಗಳಿಸಿ ಇನಿಂಗ್ಸ್ ಕೊನೆಗೊಳಿಸಿದರು. ಆದರೆ ಶಿವಂ ದುಬೆ ಎಂದಿನಂತೆ ಮೊತ್ತ ಉಬ್ಬಿಸುವ ಕೆಲಸ ಮಾಡಿದರು. ಒಟ್ಟು 8 ಎಸೆತ ಎದುರಿಸಿದ ಅವರು 26 ರನ್ ಗಳಿಸಿದರು. ಇದರೊಂದಿಗೆ ಟೀಂ ಇಂಡಿಯಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು. ಇದು ಟಿ20 ವಿಶ್ವಕಪ್ ಫೈನಲ್ ನ ಗರಿಷ್ಠ ಸ್ಕೋರ್ ಆಗಿದೆ.