Publish Date: Thu, 07 May 2026 (13:53 IST)
Updated Date: Thu, 07 May 2026 (13:55 IST)
ಮುಂಬೈ: ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ದಕ್ಷಿಣ ಕನ್ನಡದ ದೇವಿಶಾ ಶೆಟ್ಟಿ ಅವರನ್ನು ಮದುವೆಯಾಗಿರುವ ಸೂರ್ಯಕುಮಾರ್ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.
ರಾಯ್‌ಪುರದಲ್ಲಿ ಭಾನುವಾರ ನಡೆಯಲಿರುವ ಐಪಿಎಲ್ 2026ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಗೈರು ಹಾಜರಾಗಲಿದ್ದಾರೆ ಎನ್ನಲಾಗಿದೆ. ಸೂರ್ಯಕುಮಾರ್ ಅವರು ತಂಡದ ಉಪನಾಯಕನಾಗಿದ್ದಾರೆ.
ತಂಡದ ಪೂರ್ಣಕಾಲಿಕ ನಾಯಕ ಹಾರ್ದಿಕ್ ಪಾಂಡ್ಯ ಇನ್ನೂ ಬೆನ್ನುನೋವಿನಿಂದ ಚೇತರಿಸಿಕೊಂಡಿಲ್ಲ. ಹಂಗಾಮಿ ನಾಯಕನಾಗಿರುವ ಸೂರ್ಯಕುಮಾರ್ ಗೈರಾದರೆ ಮುಂಬೈ ತಂಡವು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ತಮ್ಮ ಮೂರನೇ ನಾಯಕನೊಂದಿಗೆ ಆಡುವ ಸಾಧ್ಯತೆ ಇದೆ.
ಹಾರ್ದಿಕ್‌ಗೆ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಸೂರ್ಯಕುಮಾರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ತಂಡವನ್ನು ಮುನ್ನಡೆಸಿದ್ದರು. ಆರ್‌ಸಿಬಿ ಪಂದ್ಯದಿಂದ ಇಬ್ಬರೂ ಕ್ರಿಕೆಟಿಗರು ಹೊರಗುಳಿಯುವ ನಿರೀಕ್ಷೆಯಿರುವುದರಿಂದ, ವೇಗಿ ಜಸ್‌ಪ್ರೀತ್ ಬುಮ್ರಾ ತಂಡ ಮುನ್ನಡೆಸುವವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರು ಜುಲೈ 7, 2016 ರಂದು ದಕ್ಷಿಣ ಭಾರತದ ಸಂಪ್ರದಾಯದಂತೆ ದೇವಿಶಾ ಶೆಟ್ಟಿ ಅವರನ್ನು ವಿವಾಹವಾದರು. ಇವರು ಮುಂಬೈನ ಆರ್.ಎ. ಪೋಡರ್ ಕಾಲೇಜಿನಲ್ಲಿ ಓದುತ್ತಿದ್ದಾಗ ಪರಿಚಿತರಾಗಿದ್ದರು. ದೇವಿಶಾ ಶೆಟ್ಟಿ ಭರತನಾಟ್ಯ ಕಲಾವಿದೆ ಮತ್ತು ಸೂರ್ಯಕುಮಾರ್ ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಅವರು ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕಿನವರು.
ಇತ್ತೀಚೆಗೆ ಈ ದಂಪತಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸೀಮಂತ ಕಾರ್ಯಕ್ರಮವನ್ನು ಆಚರಿಸಿದರು. ಈ ವಿಶೇಷ ಕಾರ್ಯಕ್ರಮದ ಫೋಟೋ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಶುಭಾಶಯಗಳ ಮಳೆಗರೆದು ಸಂತೋಷ ವ್ಯಕ್ತಪಡಿಸಿದ್ದರು