ಧರ್ಮಶಾಲಾ: ಯಾಕೋ ಇತ್ತೀಚೆಗೆ ನೀವು ನಾಯಕರಾದ ಮೇಲೆ ಫಾರ್ಮ್ ಕಳೆದುಕೊಂಡಿದ್ದೀರಿ ಎನಿಸುತ್ತದೆ ಎಂದು ಕೇಳಿದರೆ ಟೀಂ ಇಂಡಿಯಾ ಟಿ20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅಳಿಯ ಅಲ್ಲ ಮಗಳ ಗಂಡ ಎನ್ನುವಂತೆ ಪ್ರತಿಕ್ರಿಯಿಸಿದ್ದಾರೆ.
ಕಳೆದ 21 ಟಿ20 ಪಂದ್ಯಗಳಿಂದ ಸೂರ್ಯಕುಮಾರ್ ಗಳಿಸಿದ್ದು ಕೇವಲ 239 ರನ್. ಇದರಲ್ಲಿ ಒಮ್ಮೆಯೂ ಅರ್ಧಶತಕ ಕೂಡಾ ದಾಖಲಿಸಿಲ್ಲ. ಕೇವಲ 47 ರನ್ ಗಳಿಸಿದ್ದಷ್ಟೇ ಗರಿಷ್ಠ ಸಾಧನೆ. ಅವರ ಬ್ಯಾಟಿಂಗ್ ಫಾರ್ಮ್ ಈಗ ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವಾಗಿದೆ.
ನಿನ್ನೆಯ ಪಂದ್ಯದಲ್ಲೂ ಸೂರ್ಯ ಗಳಿಸಿದ್ದು ಕೇವಲ 12 ರನ್. ಅವರ ಈ ಕಳಪೆ ಫಾರ್ಮ್ ಬಗ್ಗೆ ಪಂದ್ಯದ ನಂತರ ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರಿಸಿದ ಅವರು ನಾನು ಫಾರ್ಮ್ ಕಳೆದುಕೊಂಡಿಲ್ಲ. ಆದರೆ ರನ್ ಗಳಿಸುತ್ತಿಲ್ಲ ಅಷ್ಟೇ ಎಂದು ಅಳಿಯ ಅಲ್ಲ ಮಗಳ ಗಂಡ ಎನ್ನುವ ರೀತಿಯ ಉತ್ತರಿಸಿದ್ದಾರೆ.
ಅವರ ಈ ಉತ್ತರಕ್ಕೆ ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ. ನೀವು ಫಾರ್ಮ್ ನಲ್ಲಿದ್ದೀರೋ ಬಿಡ್ತೀರೋ ತಂಡಕ್ಕೆ ಬೇಕಾಗಿರೋದು ರನ್. ಅದನ್ನೇ ಗಳಿಸಿಲ್ಲ ಎಂದ ಮೇಲೆ ಇದ್ದೂ ಏನು ಪ್ರಯೋಜನ ಎಂದು ಟ್ರೋಲ್ ಮಾಡಿದ್ದಾರೆ.