ಮುಂಬೈ: ಭಾರತ ಟಿ20 ಕ್ರಿಕೆಟ್ ತಂದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಆಲ್‌ರೌಂಡರ್ ಶಿವಂ ದುಬೆ ಅವರು ರಣಜಿ ಟ್ರೋಫಿಯ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ.
ಹರಿಯಾಣ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ 18 ಸದಸ್ಯ ಬಲದ ಮುಂಬೈ ತಂಡವನ್ನು ಪ್ರಕಟಿಸಲಾಗಿದೆ. ಫೆಬ್ರುವರಿ 8ರಂದು ಪಂದ್ಯ ಆರಂಭವಾಗಲಿದೆ. ತಂಡವನ್ನು ಅನುಭವಿ ಆಟಗಾರ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಇದೀಗಷ್ಟೇ ಅಂತ್ಯಗೊಂಡ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತ 4-1ರ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ, ಸೂರ್ಯಕುಮಾರ್ ಅವರು ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ.
ಟೂರ್ನಿಯಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ್ದ ದುಬೆ ಕೂಡ, ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅನುಭವಿ ಆಟಗಾರರಾದ ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್ ತಂಡದಲ್ಲಿದ್ದಾರೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ವಿರುದ್ಧದ ಪಂದ್ಯದಲ್ಲಿ ಮುಂಬೈ ಸೋಲಿನ ಆಘಾತಕ್ಕೊಳಗಾಗಿತ್ತು. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಯುವ ಪ್ರತಿಭಾವಂತ ಆಟಗಾರ ಯಶಸ್ವಿ ಜೈಸ್ವಾಲ್ ಸೇರಿದಂತೆ ಪ್ರಮುಖರು ತಂಡದಲ್ಲಿದ್ದರೂ ಗೆಲುವು ಗಳಿಸಲು ಸಾಧ್ಯವಾಗಿರಲಿಲ್ಲ.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮೇಘಾಲಯ ವಿರುದ್ಧ ಇನಿಂಗ್ಸ್ ಹಾಗೂ 456 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿತ್ತು.