ಮುಂಬೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಔಪಚಾರಿಕ ಟಿ20 ಪಂದ್ಯ ನಡೆಯಲಿದೆ. ಐದು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ ಈಗಾಗಲೇ 3-1 ಅಂತರದಿಂದ ಗೆದ್ದುಕೊಂಡಿದೆ.
ಹೀಗಾಗಿ ಈ ಪಂದ್ಯ ಭಾರತಕ್ಕೆ ಔಪಚಾರಿಕವಾಗಿದೆ. ಒಂದು ವೇಳೆ ಸೋತರೂ ಸರಣಿ ಕೈತಪ್ಪಿ ಹೋಗಲ್ಲ. ಆದರೆ ಕಳೆದ ಪಂದ್ಯದಲ್ಲಿ ಹರ್ಷಿತ್ ರಾಣಾರನ್ನು ಬದಲಿ ಆಟಗಾರನಾಗಿ ಕರೆತಂದು ಟೀಂ ಇಂಡಿಯಾ ಮೋಸ ಮಾಡಿತ್ತು ಎಂದು ಇಂಗ್ಲೆಂಡ್ ಆಪಾದಿಸಿತ್ತು.
ಆ ಅಪವಾದ ತೊಡೆದು ನಾವು ಯಾವುದೇ ಆಟಗಾರನಾಗಿದ್ದರೂ ಗೆಲ್ಲುವ ಸಾಮರ್ಥ್ಯ ಹೊಂದಿದ್ದೇವೆ ಎಂದು ತೋರಿಸಿಕೊಳ್ಳುವ ಅನಿವಾರ್ಯತೆ ಸೂರ್ಯಕುಮಾರ್ ಯಾದವ್ ಪಡೆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಹೆಚ್ಚು ಸದ್ದು ಮಾಡಿಲ್ಲ.
ಆದರೆ ಕೊನೆಯ ಪಂದ್ಯವಾಗಿರುವುದರಿಂದ ಈ ಪಂದ್ಯಕ್ಕೆ ಇದುವರೆಗೆ ಅವಕಾಶ ಸಿಗದ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಬದಲಿ ಆಟಗಾರನಾಗಿದ್ದ ಉತ್ತಮ ಪ್ರದರ್ಶನ ನೀಡಿದ್ದ ಹರ್ಷಿತ್ ರಾಣಾಗೆ ಇಂದು ಆಡುವ ಬಳಗದಲ್ಲಿ ಅವಕಾಶ ಸಿಗಬಹುದು. ಉಳಿದಂತೆ ತಂಡದ ಕಾಂಬಿನೇಷನ್ ನಲ್ಲಿ ಯಾವ ಬದಲಾವಣೆಯಿರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.