ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
ಗಂಗೂಲಿ ಅವರು ದಕ್ಷಿಣ ಆಫ್ರಿಕಾದ ಎಸ್‌ಎ20 ಲೀಗ್‌ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸೌರವ್ ಗಂಗೂಲಿ ಮುಖ್ಯ ಕೋಚ್ ಆಗಿ ತಂಡವೊಂದಕ್ಕೆ ತರಬೇತಿ ನೀಡಲಿದ್ದಾರೆ.
ಈ ಹಿಂದೆ ಬಿಸಿಸಿಐ ಅಧ್ಯಕ್ಷ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಸೌರವ್ ಗಂಗೂಲಿ ಶೀಘ್ರದಲ್ಲೇ ದೊಡ್ಡ ಕ್ರಿಕೆಟ್ ಲೀಗ್‌ನಲ್ಲಿ ಮುಖ್ಯ ಕೋಚ್ ಹುದ್ದೆಗೇರಲಿದ್ದಾರೆ. ಅಂದರೆ ಇದೇ ಮೊದಲ ಬಾರಿಗೆ ಸೌರವ್ ಗಂಗೂಲಿ ಮುಖ್ಯ ಕೋಚ್ ಆಗಿ ತಂಡವೊಂದಕ್ಕೆ ತರಬೇತಿ ನೀಡಲಿದ್ದಾರೆ.
ಇತ್ತೀಚೆಗಷ್ಟೇ ಸೌರವ್ ಗಂಗೂಲಿ ಟೀಂ ಇಂಡಿಯಾದ ಕೋಚ್ ಆಗುವ ಬಯಕೆಯನ್ನು ವ್ಯಕ್ತಪಡಿಸಿದರು. ನಾನು ಭಾರತೀಯ ತಂಡದ ಕೋಚ್ ಆಗಲು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದರು. ಅದಕ್ಕೆ ಪೂರ್ವಭಾವಿಯಾಗಿ ಈ ಹೆಜ್ಜೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ.
ವಾಸ್ತವವಾಗಿ ದಕ್ಷಿಣ ಆಫ್ರಿಕಾದ ಟಿ20 ಲೀಗ್ ಎಸ್‌ಎ20 ನ ಮುಂಬರುವ ಸೀಸನ್‌ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ಅವರನ್ನು ನೇಮಕ ಮಾಡಲಾಗಿದೆ. ವೃತ್ತಿಪರ ಕ್ರಿಕೆಟ್ ತಂಡದೊಂದಿಗೆ ಗಂಗೂಲಿಯ ಮೊದಲ ಪೂರ್ಣ ಸಮಯದ ತರಬೇತಿ ಅನುಭವ ಇದಾಗಿದೆ.
ಕಳೆದ ಆವೃತ್ತಿಯಲ್ಲಿ ತಂಡದ ಉಸ್ತುವಾರಿ ವಹಿಸಿಕೊಂಡಿದ್ದ ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜೊನಾಥನ್ ಟ್ರಾಟ್ ಕೋಚ್ ಹುದ್ದೆಯಿಂದ ಕೆಳಗಿಳಿದ ಒಂದು ದಿನದ ನಂತರ ಗಂಗೂಲಿ ಅವರ ನೇಮಕವಾಗಿದೆ. ಮುಂಬರುವ ಆವೃತ್ತಿ 26 ಡಿಸೆಂಬರ್ 2025 ರಿಂದ 25 ಜನವರಿ 2026 ರವರೆಗೆ ನಡೆಯಲಿದೆ.