Publish Date: Sun, 28 Dec 2025 (21:57 IST)
Updated Date: Sun, 28 Dec 2025 (22:00 IST)
ತಿರುವನಂತರಪುರಂ: ವೈಯಕ್ತಿಕ ನೋವುಗಳು ಏನೇ ಇರಲಿ, ಆದರೆ ಆಟ ಎಂದು ಬಂದರೆ ತಾನು ಸಿಂಹಿಣಿಯೇ ಎಂದು ಭಾರತ ಮಹಿಳಾ ಕ್ರಿಕೆಟ್ ನ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ನಿರೂಪಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಮೊದಲ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಸ್ಮೃತಿ ಇಂದು ನಾಲ್ಕನೇ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದರು. ಕೇವಲ 48 ಎಸೆತಗಳಲ್ಲಿ 80 ರನ್ ಚಚ್ಚಿದ ಸ್ಮೃತಿ ಅತೀ ವೇಗದ 10,000 ರನ್ ಪೂರೈಸಿದ ದಾಖಲೆ ಮಾಡಿದರು. ಮಹಿಳಾ ಕ್ರಿಕೆಟ್ ನಲ್ಲಿ ಅವರು 10,000 ರನ್ ಪೂರೈಸಿದ ನಾಲ್ಕನೇ ಮತ್ತು ಭಾರತೀಯರ ಪೈಕಿ ಎರಡನೇ ಆಟಗಾರ್ತಿ ಎನಿಸಿದರು.
ಅದ್ಭುತ ಫಾರ್ಮ್ ನಲ್ಲಿರುವ ಶಫಾಲಿ ವರ್ಮ ಜೊತೆಗೂಡಿದ ಸ್ಮೃತಿ ಇತ್ತೀಚೆಗೆ ಮುರಿದು ಬಿದ್ದ ತಮ್ಮ ಮದುವೆ, ತಂದೆಯ ಅನಾರೋಗ್ಯ ಎಲ್ಲವನ್ನೂ ಮರೆತು ಆಡಿದಂತೆ ತೋರಿತು. ಇಂದಿನ ಅವರ ಇನಿಂಗ್ಸ್ ನೋಡಿ ಅಂತೂ ನಮ್ಮ ಕ್ವೀನ್ ಮರಳಿ ಫಾರ್ಮ್ ಗೆ ಬಂದರು ಎಂದು ಎಷ್ಟೋ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಇಂದಿನ ದಿನದಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 221 ರನ್ ಕಲೆ ಹಾಕಿತು. ಟಿ20 ಕ್ರಿಕೆಟ್ ನಲ್ಲಿ ಇದು ಭಾರತದ ಗರಿಷ್ಠ ಮೊತ್ತವಾಗಿದೆ. ಇದಕ್ಕೆ ಉತ್ತರವಾಗಿ ಲಂಕಾ ಇತ್ತೀಚೆಗಿನ ವರದಿ ಬಂದಾಗ 16 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದೆ. ಲಂಕಾ ಇನ್ನೂ ಗೆಲುವಿಗೆ 24 ಎಸೆತಗಳಲ್ಲಿ 76 ರನ್ ಗಳಿಸಬೇಕಿದೆ.