ಹೈದರಾಬಾದ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಶುಬ್ನಂ ಗಿಲ್ ದ್ವಿಶತಕ ಸಿಡಿಸಿದ್ದರು.
ಈ ದ್ವಿಶತಕದ ಬಳಿಕ ಶುಬ್ನಂ ಗಿಲ್ ರನ್ನು ರೋಹಿತ್ ಶರ್ಮಾ, ಇಶಾನ್ ಕಿಶನ್ ಸಂದರ್ಶನ ನಡೆಸಿದ್ದರು. ಈ ವೇಳೆ ಪ್ರತೀ ಪಂದ್ಯಕ್ಕೆ ಮೊದಲು ತಾವು ಮಾಡುವ ಒಂದು ಕೆಲಸವನ್ನು ಗಿಲ್ ಹೇಳಿಕೊಂಡಿದ್ದಾರೆ.
ಪ್ರತೀ ಪಂದ್ಯಕ್ಕೆ ಮೊದಲು ಇಶಾನ್ ಕಿಶನ್ ಜೊತೆ ಜಗಳವಾಡುವುದು ತನ್ನ ನಿತ್ಯದ ರೊಟೀನ್ ಎಂದು ಗಿಲ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಇಶಾನ್ ಮತ್ತು ಗಿಲ್ ರೂಂ ಹಂಚಿಕೊಳ್ಳುತ್ತಾರೆ. ಪ್ರತೀ ಬಾರಿ ಇಶಾನ್ ಐಪ್ಯಾಡ್ ನಲ್ಲಿ ಸಿನಿಮಾ ನೋಡುವಾಗ ಇಯರ್ ಫೋನ್ ಹಾಕಿಕೊಳ್ಳದೇ ಜೋರಾಗಿ ಸಿನಿಮಾ ಹಾಕಿಕೊಳ್ಳುತ್ತಾರಂತೆ. ಇದರಿಂದ ಗಿಲ್ ಗೆ ಕಿರಿ ಕಿರಿಯಾಗುತ್ತದೆ. ಹೀಗಾಗಿ ಒಂದೋ ಶಬ್ಧ ಕಡಿಮೆ ಮಾಡು ಇಲ್ಲವೇ ಇಯರ್ ಫೋನ್ ಹಾಕಿಕೋ ಎಂದು ತಾಕೀತು ಮಾಡುತ್ತಾರಂತೆ. ಆದರೆ ಇಶಾನ್ ಇದು ನನ್ನ ರೂಂ, ನನಗೆ ಹೇಗೆ ಇಷ್ಟವೋ ಹಾಗಿರುತ್ತೇನೆ ಎಂದು ಕಿತ್ತಾಡುತ್ತಾರಂತೆ. ಈ ಕಿತ್ತಾಟದೊಂದಿಗೇ ತಮ್ಮ ತಯಾರಿ ಶುರುವಾಗುತ್ತದೆ ಎಂದು ಗಿಲ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ.