ನವದೆಹಲಿ: ಏಕದಿನ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟಿಗ ಆಂಜಲೋ ಮ್ಯಾಥ್ಯೂಸ್ ರನ್ನು ಟೈಮ್ಡ್ ಔಟ್ ಮಾಡಿದ್ದಕ್ಕೆ ಪರ-ವಿರೋಧ ವಾದಗಳು ಕೇಳಿಬರುತ್ತಿರುವ ಬೆನ್ನಲ್ಲೇ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ನಾನು ಯುದ್ಧ ಭೂಮಿಯಲ್ಲಿರುವಾಗ ಸರಿಯೋ ತಪ್ಪೋ ಯೋಚಿಸಲ್ಲ. ನನ್ನ ತಂಡದ ಗೆಲುವೇ ನನಗೆ ಮುಖ್ಯ. ಅದಕ್ಕೇ ನಿಯಮದ ಪ್ರಕಾರವೇ ಈ ನಿರ್ಧಾರ ತೆಗೆದುಕೊಂಡೆ ಎಂದು ಶಕೀಬ್ ಹೇಳಿದ್ದಾರೆ.
ನಮ್ಮ ಒಬ್ಬ ಫೀಲ್ಡರ್ ಬಂದು ಈಗ ನಾನು ಆಂಜಲೋ ಔಟ್ ಗೆ ಮನವಿ ಮಾಡಬಹುದು. ಅದಕ್ಕೆ ನಿಯಮದಲ್ಲಿ ಅವಕಾಶವಿದೆ ಎಂದರು. ಹೀಗಾಗಿ ನಾನು ಯಾಕೆ ಮಾಡಬಾರದು ಎನಿಸಿ ಅಂಪಾಯರ್ ಬಳಿ ಟೈಮ್ಡ್ ಔಟ್ ಗೆ ಮನವಿ ಸಲ್ಲಿಸಿದೆ. ಮೊದಲು ಅವರು ನೀವು ಸೀರಿಯಸ್ ಆಗಿ ಹೇಳುತ್ತಿದ್ದೀರಾ? ಎಂದು ಕೇಳಿದರು. ನಾನು ಹೌದು ಎಂದೆ. ಬಳಿಕ ಅವರು ನಮ್ಮ ಮನವಿಯನ್ನು ಪುರಸ್ಕರಿಸಿದರು. ಆಟವೆಂದರೆ ಯುದ್ಧ ಭೂಮಿಯಂತೆ. ನಾನು ಯುದ್ಧ ಭೂಮಿಯಲ್ಲಿರುವಾಗ ಸರಿ ತಪ್ಪುಗಳ ಬಗ್ಗೆ ಯೋಚಿಸುವುದು ಬಿಟ್ಟು ನನ್ನ ತಂಡದ ದೃಷ್ಟಿಯಿಂದ ಯಾವುದು ಒಳ್ಳೆಯದೋ ಅದನ್ನು ಮಾಡುತ್ತೇನೆ. ನಿಯಮದಲ್ಲಿ ಅವಕಾಶವಿದ್ದರೆ ಅದನ್ನು ನಾನು ಬಳಸುತ್ತೇನೆ ಎಂದಿದ್ದಾರೆ ಶಕೀಬ್.