ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಬಾಂಗ್ಲಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಲಂಕಾ ಬ್ಯಾಟಿಗ ಆಂಜಲೋ ಮ್ಯಾಥ್ಯೂಸ್ ವಿಚಿತ್ರ ರೀತಿಯಲ್ಲಿ ಔಟ್ ಆಗಿದ್ದಾರೆ.
ಆಗಷ್ಟೇ ಕ್ರೀಸ್ ಗೆ ಬಂದಿದ್ದ ಆಂಜಲೋ ಮ್ಯಾಥ್ಯೂಸ್ ಹೆಲ್ಮೆಟ್ ಸರಿ ಬರುತ್ತಿಲ್ಲವೆಂದು ಸಾಕಷ್ಟು ಸಮಯ ಹಾಳು ಮಾಡುತ್ತಿದ್ದರು. ಇದು ಬಾಂಗ್ಲಾ ನಾಯಕ ಶಕೀಬ್ ಅಸಮಾಧಾನಕ್ಕೆ ಕಾರಣವಾಯಿತು. ಹೀಗಾಗಿ ಶಕೀಬ್ ಅಂಪಾಯರ್ ಬಳಿ ಮ್ಯಾಥ್ಯೂಸ್ ಔಟ್ ಗಾಗಿ ಮನವಿ ಮಾಡಿದರು. ನಿಯಮದ ಪ್ರಕಾರ ಬ್ಯಾಟಿಗ ಉದ್ದೇಶಪೂರ್ವಕವಾಗಿ ಸಮಯ ಹಾಳು ಮಾಡುತ್ತಿದ್ದರೆ ಆತನನ್ನು ಔಟ್ ಎಂದು ಘೋಷಿಸುವ ಅವಕಾಶವಿದೆ.
ಇದೇ ನಿಯಮದಂತೆ ಮ್ಯಾಥ್ಯೂಸ್ ರನ್ನು ಟೈಮ್ಡ್ ಔಟ್ ಎಂದು ಘೋಷಿಸಲಾಯಿತು. ಈ ಬಗ್ಗೆ ಸ್ಥಳದಲ್ಲೇ ಮ್ಯಾಥ್ಯೂಸ್ ಅಂಪಾಯರ್ ಜೊತೆ ವಾಗ್ವಾದ ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ಟೈಮ್ಡ್ ಔಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ.
ಕೆಲವರು ನಿಧಾನಗತಿಯ ಓವರ್ ನಡೆಸಿದರೆ ಫೀಲ್ಡಿಂಗ್ ಮಾಡುವ ತಂಡಕ್ಕೆ ನಷ್ಟ. ಹೀಗಾಗಿ ಶಕೀಬ್ ಮನವಿ ಮಾಡಿದ್ದು ಸರಿ ಎಂದರೆ ಮತ್ತೆ ಕೆಲವರು ಮಾನವೀಯತೆಯ ದೃಷ್ಟಿಯಿಂದ ಮ್ಯಾಥ್ಯೂಸ್ ಗೆ ಅವಕಾಶ ಕೊಡಬೇಕಿತ್ತು ಎನ್ನುತ್ತಿದ್ದಾರೆ. ಮ್ಯಾಥ್ಯೂಸ್ ಆಗಷ್ಟೇ ಕ್ರೀಸ್ ಗೆ ಬಂದಿದ್ದರು. ಒಂದೇ ಒಂದು ಬಾಲ್ ಎದುರಿಸಿರಲಿಲ್ಲ. ಈ ರೀತಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಟೈಮ್ಡ್ ಔಟ್ ಆಗುತ್ತಿರುವ ಮೊದಲ ಕ್ರಿಕೆಟಿಗ ಎಂಬ ದಾಖಲೆ ಅವರದ್ದಾಗಿದೆ.