ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಗೆ ಏನೇ ಇದ್ದರೂ ನನಗೊಂದು ಕಾಲ್ ಮಾಡು ಎಂದು ಹೇಳಿದ್ದರಂತೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್.
ಖ್ಯಾತ ಕ್ರೀಡಾ ವಿಶ್ಲೇಷಕ ಗೌರವ್ ಕಪೂರ್ ಜೊತೆಗಿನ ಸಂದರ್ಶನವೊಂದರಲ್ಲಿ ಶಫಾಲಿ ವರ್ಮ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಏಕದಿನ ವಿಶ್ವಕಪ್ ಫೈನಲ್ ಇನಿಂಗ್ಸ್ ಬಳಿಕ ಶಫಾಲಿ ವರ್ಮ ಖ್ಯಾತಿ ಹೆಚ್ಚಾಗಿದೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲೂ ಅವರು ಸರಣಿ ಶ್ರೇಷ್ಠರಾಗಿದ್ದರು.
ಹೊಡೆಬಡಿಯ ಆಟಗಾರ್ತಿ ಸಂದರ್ಶನದಲ್ಲಿ ತಮ್ಮ ಮೆಚ್ಚಿನ ಕ್ರಿಕೆಟ್ ಆಟಗಾರನ ಬಗ್ಗೆ ಮಾತನಾಡಿದ್ದಾರೆ. ಶಫಾಲಿ ಆರಾಧಿಸುವ ಕ್ರಿಕೆಟಿಗನೆಂದರೆ ಸಚಿನ್ ತೆಂಡುಲ್ಕರ್. ಚಿಕ್ಕವರಿದ್ದಾಗ ಅವರು ರೋಹ್ಟಗಿಯಲ್ಲಿ ಪಂದ್ಯವಾಡಲು ಬಂದಾಗ ತಂದೆ ಬಳಿ ಹಠ ಹಿಡಿದು ಮೈದಾನಕ್ಕೆ ಹೋಗಿ ಪಂದ್ಯ ನೋಡಿದ್ದರಂತೆ. ಅಂದು ಸಚಿನ್ ಗಿದ್ದ ಕ್ರೇಜ್ ನೋಡಿ ನಾನೂ ಒಂದು ದಿನ ಅವರಂತೆ ಕ್ರಿಕೆಟಿಗಳಾಗಬೇಕು ಎಂದು ಸ್ಪೂರ್ತಿ ಪಡೆದಿದ್ದರಂತೆ.
ಕ್ರಿಕೆಟಿಗರಾದ ಮೇಲೆ ಮೊದಲ ಬಾರಿಗೆ ಸಚಿನ್ ಅವರನ್ನು ನೇರವಾಗಿ ಭೇಟಿ ಮಾಡಿದ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಸಚಿನ್ ಸರ್ ನ್ನು ನಾನು ಭೇಟಿಯಾಗಿದ್ದೆ. ನಾನು ಊಟ ಮಾಡುತ್ತಿದ್ದೆ. ಆಗ ಸಚಿನ್ ಸರ್ ಬಂದರು ಎಂದು ಗೊತ್ತಾಗಿ ಊಟವನ್ನು ಅಲ್ಲೇ ಬಿಟ್ಟು ಅವರ ಬಳಿ ಓಡಿದ್ದೆ. ಮೊದಲ ಬಾರಿಗೆ ಅವರನ್ನು ನೋಡಿ ನನಗೆ ಅಳುವೇ ಬಂದಿತ್ತು.
ನಾನು ನಿಮ್ಮ ದೊಡ್ಡ ಅಭಿಮಾನಿ ಎಂದೆಲ್ಲಾ ಹೇಳಿದ್ದೆ. ಅದಕ್ಕೆ ಅವರು ನಾನೂ ನಿಮ್ಮ ಆಟವನ್ನು ನೋಡಿದ್ದೇನೆ, ಚೆನ್ನಾಗಿ ಆಡುತ್ತೀ. ಕ್ರಿಕೆಟ್ ಬಗ್ಗೆ ಏನೇ ಅನುಮಾನವಿದ್ದರೂ ಅಥವಾ ನನ್ನಿಂದ ಏನೇ ಸಹಾಯ ಬೇಕಿದ್ದರೂ ನನಗೊಂದು ಕರೆ ಮಾಡು ಸಾಕು ಎಂದಿದ್ದರು. ಅದರಂತೆ ಒಂದೆರಡು ಬಾರಿ ನಾನು ಅವರಿಗೆ ಕರೆ ಮಾಡಿ ಮಾತನಾಡಿದ್ದು ಇದೆ ಎಂದು ಶಫಾಲಿ ಹೇಳಿಕೊಂಡಿದ್ದಾರೆ.