ಅಡಿಲೇಡ್: ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗರು ಎನಿಸಿಕೊಂಡಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ತೀರಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇವರ ವೈಫಲ್ಯದಿಂದಾಗಿಯೇ ಟೀಂ ಇಂಡಿಯಾ ಬ್ಯಾಟಿಂಗ್ ಪ್ರದರ್ಶನ ತಳಮಟ್ಟಕ್ಕೆ ತಲುಪಿದೆ.
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದರಾದರೂ ಅವರ ಫಾರ್ಮ್ ಎಂದಿನಷ್ಟು ಉತ್ಕೃಷ್ಟ ಮಟ್ಟದಲ್ಲಿಲ್ಲ ಎನ್ನುವುದು ಈಗ ರಹಸ್ಯವಾಗಿ ಉಳಿದಿಲ್ಲ. ರೋಹಿತ್ ಶರ್ಮಾರದ್ದೂ ಇದೇ ಕತೆ. ಈ ಇಬ್ಬರೂ ಆಟಗಾರರು ಕಳೆದ 10 ಟೆಸ್ಟ್ ಇನಿಂಗ್ಸ್ ಗಳಿಸಿದ ಸ್ಕೋರ್ ವಿವರ ನೋಡೋಣ.
ವಿರಾಟ್ ಕೊಹ್ಲಿ
ವಿಶ್ವ ಕ್ರಿಕೆಟ್ ನ ದಿಗ್ಗಜ, ಕಿಂಗ್ ಎಂದು ಕರೆಯಿಸಿಕೊಳ್ಳುವ ವಿರಾಟ್ ಕೊಹ್ಲಿ ಕಳೆದ 10 ಇನಿಂಗ್ಸ್ ಗಳಿಂದ ಗಳಿಸಿದ್ದು 215 ರನ್. ಇದರಲ್ಲಿ ಒಂದು ಶತಕ ಮತ್ತು ಒಂದ ಅರ್ಧಶತಕ ಸೇರಿದೆ. ಆರು ಬಾರಿ ಏಕಂಕಿ ಸಾಧನೆ. ಒಂದು ಬಾರಿ11 ಮತ್ತು ಇನ್ನೊಂದು ಬಾರಿ 17 ರನ್ ಗಳಿಸಿದ್ದರು. ಶತಕ ಮತ್ತು ಅರ್ಧಶತಕ ಬಂದಿದ್ದು ಭಾರತ ಒತ್ತಡದಲ್ಲಿರುವಾಗ ಅಲ್ಲ ಎನ್ನುವುದು ಗಮನಿಸಬೇಕಾದ ಅಂಶ.
ರೋಹಿತ್ ಶರ್ಮಾ
ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸಾಧನೆ ಕೊಹ್ಲಿಗಿಂತಲೂ ಕಳಪೆ. ಅವರು ಕಳೆದ 10 ಇನಿಂಗ್ಸ್ ಗಳಲ್ಲಿ ಒಂದೇ ಒಂದು ಶತಕ ದಾಖಲಿಸಿಲ್ಲ. ಒಮ್ಮೆ ಮಾತ್ರ 52 ರನ್ ಗಳಿಸಿದ್ದಾರೆ. ಅದು ಬಿಟ್ಟರೆ 23 ಅವರ ಗರಿಷ್ಠ ರನ್. ಉಳಿದಂತೆ ಅವರು 12 ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಸದ್ಯಕ್ಕೆ ರೋಹಿತ್ ಅತ್ಯಂತ ಕೆಟ್ಟ ಫಾರ್ಮ್ ನಲ್ಲಿದ್ದು, ಒಂದು ವೇಳೆ ಅವರು ನಾಯಕನಾಗದೇ ಹೋಗಿದ್ದರೆ ತಂಡದಿಂದಲೇ ಕಿಕ್ ಔಟ್ ಆಗುತ್ತಿದ್ದರು.