ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯವನ್ನು ಸೋತ ಬಳಿಕ ಟೀಂ ಇಂಡಿಯಾ ಮೂರನೇ ಪಂದ್ಯವನ್ನು ಗೆಲ್ಲುವ ಒತ್ತಡದಲ್ಲಿದೆ. ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಮ್ಮೆ ತ್ಯಾಗ ಮಾಡಲು ಹೊರಟಿದ್ದಾರೆ.
ರೋಹಿತ್ ಶರ್ಮಾ ಮೊದಲ ಟೆಸ್ಟ್ ಪಂದ್ಯವನ್ನು ಆಡಿರಲಿಲ್ಲ. ಹೀಗಾಗಿ ಕೆಎಲ್ ರಾಹುಲ್ ಅವರ ಸ್ಥಾನದಲ್ಲಿ ಓಪನರ್ ಆಗಿ ಕಣಕ್ಕಿಳಿದು ಕ್ಲಿಕ್ ಆಗಿದ್ದರು. ರಾಹುಲ್ ಬ್ಯಾಟಿಂಗ್ ಗೆ ಮನಸೋತ ರೋಹಿತ್ ಎರಡನೇ ಪಂದ್ಯಕ್ಕೆ ತಾವು ಕಮ್ ಬ್ಯಾಕ್ ಮಾಡಿದರೂ ಓಪನರ್ ಸ್ಥಾನ ತ್ಯಾಗ ಮಾಡಿದರು.
ರಾಹುಲ್ ಗೆ ಓಪನರ್ ಸ್ಥಾನ ಬಿಟ್ಟುಕೊಟ್ಟ ರೋಹಿತ್ ತಾವು ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಇದರಿಂದ ಅವರು ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿದರು. ಹಾಗಿದ್ದರೂ ರೋಹಿತ್ ತಮ್ಮ ಬ್ಯಾಟಿಂಗ್ ಸ್ಥಾನ ಬದಲಾಯಿಸಲ್ಲ ಎನ್ನಲಾಗಿದೆ. ಟೀಂ ಇಂಡಿಯಾ ನೆಟ್ ಪ್ರಾಕ್ಟೀಸ್ ವೇಳೆ ಈ ಸುಳಿವು ಸಿಕ್ಕಿದೆ.
ಗಬ್ಬಾದಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಅಭ್ಯಾಸ ಆರಂಭಿಸಿದೆ. ನೆಟ್ ಪ್ರಾಕ್ಟೀಸ್ ವೇಳೆ ಯಶಸ್ವಿ ಜೈಸ್ವಾಲ್ ಜೊತೆ ಕೆಎಲ್ ರಾಹುಲ್ ಅವರೇ ಅಭ್ಯಾಸ ನಡೆಸಿದ್ದಾರೆ. ಬಳಿಕ ಗಿಲ್, ಕೊಹ್ಲಿ ಎಂಬಂತೆ ತಮ್ಮ ಬ್ಯಾಟಿಂಗ್ ಕ್ರಮಾಂಕದ ಅನುಸಾರವಾಗಿಯೇ ಎಲ್ಲರೂ ಅಭ್ಯಾಸ ನಡೆಸಿದ್ದು ರೋಹಿತ್ ಆರನೇ ಬ್ಯಾಟಿಗನಾಗಿ ಅಭ್ಯಾಸ ನಡೆಸಿದ್ದಾರೆ. ಹೀಗಾಗಿ ಮೂರನೇ ಟೆಸ್ಟ್ ನಲ್ಲೂ ಅವರು ರಾಹುಲ್ ಗೇ ಓಪನಿಂಗ್ ಸ್ಥಾನ ಬಿಟ್ಟುಕೊಡಲಿದ್ದಾರೆ ಎನ್ನಲಾಗಿದೆ.