ಸಿಡ್ನಿ: ಕಳಪೆ ಫಾರ್ಮ್ ನಿಂದಾಗಿ ಸಿಡ್ನಿ ಟೆಸ್ಟ್ ನಿಂದ ಹೊರಗುಳಿದಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಪಂದ್ಯದ ಬಳಿಕ ನಿವೃತ್ತಿಯಾಗಬಹುದು ಎಂಬ ಮಾತು ಕೇಳಿಬರುತ್ತಿತ್ತು. ಅದಕ್ಕೀಗ ಅವರೇ ಉತ್ತರ ನೀಡಿದ್ದಾರೆ.
ರೋಹಿತ್ ಶರ್ಮಾ ಈ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿತ್ತು. ತಂಡದ ಒಡಕು ಬಟಾ ಬಯಲಾಗಿತ್ತು. ಕೋಚ್ ಗೌತಮ್ ಗಂಭೀರ್ ಜೊತೆಗೆ ರೋಹಿತ್ ಸಂಬಂಧ ಸಂಪೂರ್ಣ ಹಳಸಿದೆ ಎನ್ನಲಾಗಿತ್ತು. ಆದರೆ ಈಗ ಎಲ್ಲಾ ಅನುಮಾನಗಳಿಗೆ ಸ್ವತಃ ರೋಹಿತ್ ಉತ್ತರ ನೀಡಿದ್ದಾರೆ.
ನಾನು ರನ್ ಗಳಿಸಲು ವಿಫಲನಾಗುತ್ತಿದ್ದೇನೆ ಎಂಬ ಕಾರಣಕ್ಕೆ ಈ ಟೆಸ್ಟ್ ನಿಂದ ಹೊರಗುಳಿಯುವ ನಿರ್ಧಾರ ಮಾಡಿದೆ. ಆದರೆ ಸದ್ಯಕ್ಕೆ ನಾನು ಕ್ರಿಕೆಟ್ ಬಿಟ್ಟು ಎಲ್ಲೂ ಹೋಗಲ್ಲ. ಈ ಪಂದ್ಯದ ಬಳಿಕ ನಿವೃತ್ತಿಯಾಗುವ ಯೋಚನೆಯೂ ಇಲ್ಲ. ನಾನು ಕೋಚ್ ಮತ್ತು ಆಯ್ಕೆ ಸಮಿತಿ ಜೊತೆ ಮಾತನಾಡಿದೆ. ಸದ್ಯಕ್ಕೆ ತಂಡಕ್ಕೆ ಏನು ಅಗತ್ಯವೆನಿಸಿತೋ ಅದನ್ನೇ ಮಾಡಿದ್ದೇವೆ. ತಂಡಕ್ಕೆ ಒಬ್ಬ ಒಳ್ಳೆಯ ಫಾರ್ಮ್ ನಲ್ಲಿರುವ ಬ್ಯಾಟಿಗನ ಅಗತ್ಯವಿತ್ತು. ಅದಕ್ಕೇ ನಾನು ಹಿಂದೆ ಸರಿದೆ. ಪರ್ತ್ ನಲ್ಲಿ ನಾನು ಇಲ್ಲದೇ ಇರುವಾಗ ತಂಡ ಗೆದ್ದಿರುವುದಕ್ಕೆ ಕಾರಣ ಎಲ್ಲರಿಗೂ ಗೊತ್ತು. ರಾಹುಲ್-ಜೈಸ್ವಾಲ್ ನಡುವಿನ ಆ 200 ರನ್ ಗಳ ಜೊತೆಯಾಟ ನಮ್ಮನ್ನು ರಕ್ಷಿಸಿತು. ಸೋಲುತ್ತಿದ್ದ ಪಂದ್ಯವನ್ನು ಅವರು ನಮ್ಮ ಪರವಾಗಿ ಮಾಡಿದರು ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್ ನಿಂದ ರೋಹಿತ್ ನಿವೃತ್ತಿಯಾಗಲಿದ್ದಾರೆ ಎಂಬ ಎಲ್ಲಾ ವದಂತಿಗಳಿಗೆ ಈ ಪ್ರತಿಕ್ರಿಯೆ ಉತ್ತರ ನೀಡಿದೆ. ಆದರೆ ಮುಂಬರುವ ದಿನಗಳಲ್ಲಿ ಅವರಿಗೆ ಟೆಸ್ಟ್ ನಾಯಕತ್ವ ಸಿಗುತ್ತದೆಯೇ ಎಂಬುದು ಆಯ್ಕೆ ಸಮಿತಿಗೆ ಬಿಟ್ಟ ವಿಚಾರ. ಆದರೆ ಹಿಟ್ ಮ್ಯಾನ್ ನಿವೃತ್ತಿಯಾಗುತ್ತಿಲ್ಲ ಎನ್ನುವುದು ಅವರ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ.