ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ತಮ್ಮ ನೈಸರ್ಗಿಕ ಆಟಕ್ಕೆ ತದ್ವಿರುದ್ಧವಾಗಿ ತಾಳ್ಮೆಯಿಂದ ಆಡಿ ಶತಕ ಗಳಿಸಿದ್ದಾರೆ.
ಎರಡನೇ ದಿನವಾದ ಇಂದು ಇತ್ತೀಚೆಗಿನ ವರದಿ ಬಂದಾಗ ರೋಹಿತ್ ಶರ್ಮಾ 120 ರನ್ ಗಳಿಸಿ ಔಟಾಗಿದ್ದು, ಭಾರತದ 6 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದೆ. ಇದರೊಂದಿಗೆ ಟೀಂ ಇಂಡಿಯಾ 52 ರನ್ ಗಳ ಮುನ್ನಡೆಯನ್ನೂ ಸಾಧಿಸಿ ಬ್ಯಾಟಿಂಗ್ ಮುಂದುವರಿಸಿದೆ. ಇನ್ನೊಂದೆಡೆ ರವೀಂದ್ರ ಜಡೇಜಾ 34 ರನ್ ಗಳಿಸಿ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ನಿನ್ನೆ ಅಜೇಯರಾಗುಳಿದಿದ್ದ ಅಶ್ವಿನ್ ಇಂದು 23 ರನ್ ಗಳಿಸಿ ಔಟಾದರು. ಚೇತೇಶ್ವರ ಪೂಜಾರ ಕೇವಲ 7 ರನ್ ಗಳಿಸಿದರೆ ಕೊಹ್ಲಿಯದ್ದು ಕೇವಲ 12 ರನ್ ಗಳ ಕೊಡುಗೆ. ಚೊಚ್ಚಲ ಪಂದ್ಯವಾಡುತ್ತಿರುವ ಸೂರ್ಯಕುಮಾರ್ ಯಾದವ್ 8 ರನ್ ಗಳಿಸಲಷ್ಟೇ ಶಕ್ತರಾದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ನಿನ್ನೆಯಿಂದ ಇಂದಿನವರೆಗೆ ತಾಳ್ಮೆಯಿಂದ ಆಡಿದ ರೋಹಿತ್ ನಾಯಕನಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಶತಕ ಗಳಿಸಿದರು. ಸಾಮಾನ್ಯವಾಗಿ ವೇಗವಾಗಿ ರನ್ ಗಳಿಸುವ ರೋಹಿತ್ ಇಂದು ತಮ್ಮ ಜವಾಬ್ಧಾರಿ ಅರಿತು ಅಡಿದರು. 120 ರನ್ ಗಳಿಸಲು ಅವರು 212 ಎಸೆತ ಎದುರಿಸಿದರು. ಇಲ್ಲಿ 2 ಸಿಕ್ಸರ್ 15 ಬೌಂಡರಿ ಸೇರಿತ್ತು. ಪುಲ್ ಶಾಟ್ ಗಳ ಮೂಲಕ ಸಿಕ್ಸರ್ ಎತ್ತುವ ರೋಹಿತ್ ಇಂದು ಗ್ರೌಂಡ್ ಶಾಟ್ ಗಳಿಗೆ ಪ್ರಾಧಾನ್ಯತೆ ನೀಡಿದರು. ಅಂತಿಮವಾಗಿ ಆಸೀಸ್ ನಾಯಕ ಕ್ಯುಮಿನ್ಸ್ ಎಸೆತದಲ್ಲಿ ಬೌಲ್ಡ್ ಔಟ್ ಆದರು. ಆಸೀಸ್ ಪರ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಟಾಡ್ ಮುರ್ಫಿ ಈಗಾಗಲೇ 4 ವಿಕೆಟ್ ಕಬಳಿಸಿದ್ದಾರೆ.