ನವದೆಹಲಿ: ರಿಷಭ್ ಪಂತ್, ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ಶುಬ್ಮನ್ ಗಿಲ್ ಫಾರ್ಮ್ ಕಂಡುಕೊಳ್ಳಲು ರಣಜಿ ತಂಡ ಸೇರಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ಇದುವರೆಗೆ ಇಂಟ್ರೆಸ್ಟ್ ತೋರಿಸಿಲ್ಲ.
ರಿಷಭ್ ಪಂತ್ ದೆಹಲಿ ಪರ ರಣಜಿ ಆಡಲು ಮುಂದೆ ಬಂದಿದ್ದಾರೆ. ವಿರಾಟ್ ಕೊಹ್ಲಿ ಕೂಡಾ ಮೂಲತಃ ದೆಹಲಿಯವರೇ. ಆದರೆ ತಮ್ಮ ತವರು ತಂಡದ ಪರ ರಣಜಿಯಲ್ಲಿ ಆಡಲು ಸ್ಟಾರ್ ಬ್ಯಾಟಿಗ ಇನ್ನೂ ಮನಸ್ಸು ಮಾಡಿಲ್ಲ. ಟೀಂ ಇಂಡಿಯಾದಲ್ಲಿ ನೇಮ್, ಫೇಮ್ ಸಿಕ್ಕ ಮೇಲೆ ಕೊಹ್ಲಿ ದೇಶೀಯ ಕ್ರಿಕೆಟ್ ಕಡೆಗೆ ತಲೆಯೂ ಹಾಕಿಲ್ಲ. ಈಗ ಫಾರ್ಮ್ ಕಳೆದುಕೊಂಡಿರುವ ಹಿನ್ನಲೆಯಲ್ಲಿ ಮತ್ತೆ ದೇಶೀಯ ಕ್ರಿಕೆಟ್ ಗೆ ಮರಳಬಹುದೇನೋ ಎಂಬ ಊಹೆಯಿತ್ತು. ಅದೂ ಸುಳ್ಳಾಗಿದೆ.
ಆದರೆ ನಾಯಕ ರೋಹಿತ್ ಶರ್ಮಾ ಈಗಾಗಲೇ ಮುಂಬೈ ರಣಜಿ ತಂಡದೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ. ಅವರು ರಣಜಿ ಪಂದ್ಯವಾಡುತ್ತಾರೆಯೇ ಎನ್ನುವುದು ಕನ್ ಫರ್ಮ್ ಆಗಿಲ್ಲ. ಆದರೆ ಇನ್ನೊಬ್ಬ ಬ್ಯಾಟಿಗ ಯಶಸ್ವಿ ಜೈಸ್ವಾಲ್ ಮುಂಬೈ ಪರ ರಣಜಿ ಆಡುವುದು ಪಕ್ಕಾ ಆಗಿದೆ.
ಇನ್ನು, ಶುಬ್ಮನ್ ಗಿಲ್ ಕೂಡಾ ತಮ್ಮ ತವರು ಪಂಜಾಬ್ ಪರ ರಣಜಿ ಪಂದ್ಯವಾಡಲಿದ್ದಾರೆ. ಪಂಜಾಬ್ ಮುಂದಿನ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಗಿಲ್ ತಂಡದಲ್ಲಿರಲಿದ್ದಾರೆ. ಕೆಎಲ್ ರಾಹುಲ್ ಕರ್ನಾಟಕ ಪರ ರಣಜಿ ಆಡಲು ಮನಸ್ಸು ಮಾಡಿಲ್ಲ. ಸದ್ಯಕ್ಕೆ ಅವರು ಗರ್ಭಿಣಿ ಪತ್ನಿ ಜೊತೆ ಕಾಲ ಕಳೆಯಲು ತೀರ್ಮಾನಿಸಿದ್ದು, ಬ್ರೇಕ್ ಬಳಿಕ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡದ ಭಾಗವಾಗಲಿದ್ದಾರೆ.