ಬೆಂಗಳೂರು: ಐಪಿಎಲ್ 2024 ರಲ್ಲಿ ರಿಷಬ್ ಪಂತ್ ಗೆ ಆಡಲು ಫಿಟ್ನೆಸ್ ಸರ್ಟಿಫಿಕೇಟ್ ಇಂದೇ ಸಿಗುವ ಸಾಧ‍್ಯತೆಯಿದೆ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡಮಿಯಿಂದ ಇಂದು ಫಿಟ್ನೆಸ್ ಸರ್ಟಿಫಿಕೇಟ್ ಸಿಗುವ ಸಾಧ‍್ಯತೆಯಿದೆ.
ಕಳೆದ ವರ್ಷ ರಸ್ತೆ ಅಪಘಾತಕ್ಕೀಡಾಗಿದ್ದ ರಿಷಬ್ ಪಂತ್ ಕಾಲು ಮುರಿತಕ್ಕೊಳಗಾಗಿದ್ದರು. ಇದಾದ ಬಳಿಕ ಅವರಿಗೆ ನಡೆದಾಡಲೂ ಕಷ್ಟವಾಗಿತ್ತು. ಶಸ್ತ್ರಚಿಕಿತ್ಸೆಗೊಳಗಾದ ನಂತರ ಚೇತರಿಕೆ ಕಂಡುಬಂದರೂ ಇದುವರೆಗೆ ಅವರು ಆಡಲು ಫಿಟ್ ಆಗಿದ್ದಾರೆಂದು ಫಿಟ್ನೆಸ್ ಸರ್ಟಿಫಿಕೇಟ್ ಸಿಕ್ಕಿರಲಿಲ್ಲ.
ಕಳೆದ ಕೆಲವು ಸಮಯದಿಂದ ಬೆಂಗಳೂರಿನ ಎನ್ ಸಿಎನಲ್ಲಿ ಅವರು ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಎನ್ ಸಿಎ ವೈದ್ಯರು ಅವರು ಆಡಲು 100% ಫಿಟ್ ಎಂದು ಸರ್ಟಿಫಿಕೇಟ್ ನೀಡಲಿದ್ದಾರೆ. ಇದಾದ ಬಳಿಕವಷ್ಟೇ ಅವರು ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮರಳಬಹುದಾಗಿದೆ.
ಮಾರ್ಚ್ 22 ರಿಂದ ಐಪಿಎಲ್ 2024 ಆರಂಭವಾಗುತ್ತಿದೆ. ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಆಡುತ್ತಾರೆ. ಡೆಲ್ಲಿ ತಂಡದ ನಾಯಕರಾಗಿ ಮತ್ತೆ ಐಪಿಎಲ್ ಗೆ ಕಮ್ ಬ್ಯಾಕ್ ಮಾಡುವ ಸಿದ್ಧತೆಯಲ್ಲಿದ್ದಾರೆ. ಐಪಿಎಲ್ ನಲ್ಲಿ ಅವರು ಆಡಲು ಸಾಧ್ಯವಾದರೆ ಮಾತ್ರ ಮುಂಬರುವ ಟಿ20 ವಿಶ್ವಕಪ್ ನಲ್ಲಿ ಆಡಲು ಅವಕಾಶ ಸಿಗಲಿದೆ. ಹೀಗಾಗಿ ಈ ಫಿಟ್ನೆಸ್ ಸರ್ಟಿಫಿಕೇಟ್ ಅವರ ವೃತ್ತಿ ಜೀವನಕ್ಕೆ ಮುಖ್ಯವಾಗಿದೆ.