ಲಖನೌ: ಆರಂಭದ ಎರಡು ಪಂದ್ಯಗಳಲ್ಲಿ ಗೆದ್ದು ಅಭಿಮಾನಿಗಳಲ್ಲಿ ಕಿಚ್ಚು ಹತ್ತಿಸಿ ನಂತರ ಸತತ ಐದು ಪಂದ್ಯಗಳನ್ನು ಸೋತು ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ತಂಡವು ಈ ಋತುವಿನ ಕೊನೆಯ ಪಂದ್ಯದಲ್ಲಿ ಗೆದ್ದು ಮಾನ ಉಳಿಸಿಕೊಳ್ಳುವ ತವಕದಲ್ಲಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಆಡಿರುವ ಏಳು ಪಂದ್ಯಗಳ ಪೈಕಿ ಆರಂಭದ ಎರಡರಲ್ಲಿ ಮಾತ್ರ ಗೆದ್ದಿರುವ ಸ್ಮೃತಿ ಮಂದಾನ ಬಳಗವು ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಕೊನೆಯ ಪಂದ್ಯವನ್ನು ಗೆಲುವಿನೊಂದಿಗೆ ಮುಗಿಸುವ ಪ್ರಯತ್ನದಲ್ಲಿದೆ.
ಮೊದಲ ಆವೃತ್ತಿಯ (2023) ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಈ ಪಂದ್ಯವನ್ನು ಗೆದ್ದು, ಅಗ್ರಸ್ಥಾನ ಪಡೆಯುವತ್ತ ಚಿತ್ತ ನೆಟ್ಟಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡವು ಸೆಮಿಫೈನಲ್‌ಗೆ ನೇರ ಪ್ರವೇಶ ಪಡೆಯಲಿದೆ. ಈ ನಿಟ್ಟಿನಲ್ಲಿ ಮುಂಬೈ ತಂಡಕ್ಕೆ ಇದು ನಿರ್ಣಾಯಕ ಪಂದ್ಯವಾಗಿದೆ.
ಹರ್ಮನ್‌ಪ್ರೀತ್ ಬಳಗವು ಆಡಿರುವ ಏಳು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದಿದ್ದರೆ, ಎರಡರಲ್ಲಿ ಸೋತು ಪಾಯಿಂಟ್ಸ್ ಪಟ್ಟಿಯಲ್ಲಿ ಸದ್ಯ ಎರಡನೇ ಸ್ಥಾನದಲ್ಲಿದೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡವು (10) ಅಗ್ರಸ್ಥಾನದಲ್ಲಿದೆ. ಗುಜರಾತ್ ಜೈಂಟ್ಸ್ (8) ಮೂರನೇ ಸ್ಥಾನದಲ್ಲಿದೆ.