ಲಖನೌ: ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯು.ಪಿ ವಾರಿಯರ್ಸ್ ಮುಖಾಮುಖಿಯಾಗುತ್ತಿದೆ. ಹಲವು ಪಂದ್ಯಗಳ ನಂತರ ಟಾಸ್ ಗೆದ್ದ ಸ್ಮೃತಿ ಮಂದಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಪ್ಲೇ ಆಫ್ ಕನಸನ್ನು ಜೀವಂತವಾಗಿ ಇರಿಸಿಕೊಳ್ಳಲು ಆರ್‌ಸಿಬಿ ತಂಡವು ಇಂದಿನ ಪಂದ್ಯವನ್ನು ಗೆಲ್ಲಲೇಬೇಕಿದೆ. ಈ ಪಂದ್ಯವನ್ನು ಸೋತಲ್ಲಿ ನಾಕೌಟ್ ರೇಸ್‌ನಿಂದ ಬೆಂಗಳೂರು ತಂಡ ಹೊರಬೀಳಲಿದೆ. ಈ ಪಂದ್ಯ ಮಾತ್ರವಲ್ಲದೆ ಲೀಗ್ ಹಂತದ ಕೊನೆಯ ಪಂದ್ಯವನ್ನೂ ಭಾರೀ ಅಂತರದಿಂದ ಗೆಲ್ಲಬೇಕಾದ ಒತ್ತಡದಲ್ಲಿ ಆರ್‌ಸಿಬಿ ತಂಡವಿದೆ.
ಬೆಂಗಳೂರು ತಂಡವು ವಡೋದರದಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಆದರೆ, ಬೆಂಗಳೂರಿನಲ್ಲಿ ನಡೆದ ನಾಲ್ಕು ಪಂದ್ಯಗಳಲ್ಲೂ ಪರಾಭವಗೊಂಡ ತವರಿನ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟು ಮಾಡಿತ್ತು.
ಮತ್ತೊಂದೆಡೆ ದೀಪ್ತಿ ಶರ್ಮಾ ನಾಯಕತ್ವದ ಯು.ಪಿ. ವಾರಿಯರ್ಸ್ ತಂಡವು ನಾಕೌಟ್ ಹಾದಿಯಿಂದ ಹೊರಬಿದ್ದಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ವಾರಿಯರ್ಸ್ ತಂಡವು ಕೊನೆಯ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈಗಾಗಲೇ ನಾಕೌಟ್ ಹಂತ ಪ್ರವೇಶಿಸಿದೆ.