ನಾಗ್ಪುರ: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ರವೀಂದ್ರ ಜಡೇಜಾ ಅದ್ಭುತ ಕೈಚಳಕ ಪ್ರದರ್ಶಿಸಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ವಿದರ್ಭ ಕ್ರಿಕೆಟ್ ಅಸೋಸಿಯೇಷನ್ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಭಾರತ ತಂಡ 248 ರನ್‌ಗಳಿಗೆ ಆಲೌಟ್ ಮಾಡಿತು.
ಭಾರತದ ರವೀಂದ್ರ ಜಡೇಜಾ (26ಕ್ಕೆ 3) ಮತ್ತು ಹರ್ಷಿತ್ ರಾಣಾ (53ಕ್ಕೆ 3) ತಲಾ ಮೂರು ವಿಕೆಟ್ ಕಬಳಿಸಿ ಭಾರತ ಮೇಲುಗೈ ಸಾಧಿಸುವಂತೆ ಮಾಡಿದರು.
ಇಂಗ್ಲೆಂಡ್ ಪರ ಜೋಸ್ ಬಟ್ಲರ್ ಮತ್ತು ಜಾಕೋಬ್ ಬೆಥೆಲ್ ಅರ್ಧಶತಕ ಗಳಸಿ ಮಿಂಚಿದರೂ, ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲವಾಯಿತು. ಈ ಜೋಡಿ ಐದನೇ ವಿಕೆಟ್‌ಗೆ 59 ರನ್‌ಗಳ ನಿರ್ಣಾಯಕ ಜೊತೆಯಾಟ ನೀಡಿತು.
ಜಾಸ್ ಬಟ್ಲರ್ 67 ಎಸೆತಗಳಲ್ಲಿ 52 ರನ್ ಗಳಿಸಿದರೆ, ಬೆಥೆಲ್ 64 ಎಸೆತಗಳಲ್ಲಿ 51 ರನ್ ಗಳಿಸಿದರು. ಅಂತೆಯೇ ಆರಂಭಿಕರಾದ ಫಿಲಿಪ್ ಸಾಲ್ಟ್ ಮತ್ತು ಬೆನ್ ಡಕೆಟ್ ಇಂಗ್ಲೆಂಡ್‌ಗೆ ಅದ್ಭುತ ಆರಂಭವನ್ನು ನೀಡಿದರು. ಆದರೆ ಅದೇ ರೀತಿಯ ಬ್ಯಾಟಿಂಗ್ ಪ್ರದರ್ಶನ ಇಂಗ್ಲೆಂಡ್ ತಂಡದ ಕೆಳ ಕ್ರಮಾಂಕದ ಇತರೆ ಆಟಗಾರರಿಂದ ಮೂಡಿಬರಲಿಲ್ಲ.
ಇನ್ನಿಂಗ್ಸ್ ನ ಅಂತಿಮ ಹಂತದಲ್ಲಿ ಇಂಗ್ಲೆಂಡ್ ದಾಂಡಿಗರನ್ನು ಇನ್ನಿಲ್ಲದಂತೆ ಕಾಡಿದ ರವೀಂದ್ರ ಜಡೇಜಾ ಕೇವಲ 26ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದರು. ಅಂತೆಯೇ ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 42ಕ್ಕೆ ಏರಿಕೆ ಮಾಡಿಕೊಂಡರು.
ಆ ಮೂಲಕ ಭಾರತ ಮತ್ತು ಇಂಗ್ಲೆಂಡ್ ಏಕದಿನ ಪಂದ್ಯಗಳಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದ ಜೇಮ್ಸ್ ಆ್ಯಂಡರ್ಸನ್ ದಾಖಲೆಯನ್ನು ರವೀಂದ್ರ ಜಡೇಜಾ ಮುರಿದರು. ಆ್ಯಂಡರ್ಸನ್ ಒಟ್ಟು 40 ವಿಕೆಟ್ ಗಳಿಸಿ ಇಷ್ಟು ದಿನ ಅಗ್ರ ಸ್ಥಾನದಲ್ಲಿದ್ದರು. ಇದೀಗ ರವೀಂದ್ರ ಜಡೇಜಾ 42 ವಿಕೆಟ್ ಗಳೊಂದಿಗೆ ಅಗ್ರ ಸ್ಥಾನಕ್ಕೇರಿದ್ದಾರೆ.