Select Your Language

Notifications

webdunia
webdunia
webdunia
webdunia

ರೂಂನಲ್ಲಿ ಒಬ್ಬನೇ ಅಳುತ್ತಿದ್ದಾಗ ರೋಹಿತ್ ಶರ್ಮಾ ಮಾಡಿದ ಸಹಾಯ ಮರೆಯಲ್ಲ: ರವಿಚಂದ್ರನ್ ಅಶ್ವಿನ್

Ravichandran Ashwin

Krishnaveni K

ಚೆನ್ನೈ , ಬುಧವಾರ, 13 ಮಾರ್ಚ್ 2024 (08:26 IST)
ಚೆನ್ನೈ: ಇತ್ತೀಚೆಗಷ್ಟೇ ಇಂಗ್ಲೆಂಡ್ ಸರಣಿ ನಡುವೆ ತಾಯಿಯ ಅನಾರೋಗ್ಯದಿಂದ ಸಂಕಷ್ಟಕ್ಕೀಡಾಗಿದ್ದ ರವಿಚಂದ್ರನ್ ಅಶ್ವಿನ್ ಆ ದಿನ ತಮಗೆ ನಾಯಕ ರೋಹಿತ್ ಶರ್ಮಾ ಮಾಡಿದ ಸಹಾಯವನ್ನು ಇದೀಗ ಸಂದರ್ಶನವೊಂದರಲ್ಲಿ ವಿವರವಾಗಿ ತಿಳಿಸಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ನೋಡೋಣ.

‘ಆವತ್ತು ನಾನು ರೋಹಿತ್, ಹಾಗೂ ತಂಡದ ಕೆಲವು ಸದಸ್ಯರು ರೂಂನಲ್ಲಿ ಕುಳಿತು ಆ ದಿನದ ಪಂದ್ಯದ ಬಗ್ಗೆ ಮಾತನಾಡುತ್ತಿದ್ದೆವು. ಸಡನ್ ಆಗಿ ನನಗೆ ನನ್ನ ಪತ್ನಿಯಿಂದ ಎಂದಿನಂತೆ ಕರೆ ಬರಲಿಲ್ಲವಲ್ಲ ಎನಿಸಿತು. ಸಾಮಾನ್ಯವಾಗಿ ಅವಳು 7 ಗಂಟೆಗೆ ಫೋನ್ ಮಾಡುವವಳು. ಅಂದು ಮಾಡಿಲ್ಲ. ತಂದೆ-ತಾಯಿಯೂ ಕರೆ ಸ್ವೀಕರಿಸುತ್ತಿರಲಿಲ್ಲ. ಪತ್ನಿಗೆ ಕರೆ ಮಾಡಿದಾಗ ಅವಳು ತಂಡದ ಸದಸ್ಯರ ಗುಂಪಿನಿಂದ ಈಚೆ ಬಂದು ಮಾತನಾಡಲು ಸೂಚಿಸಿದಳು.

ಅದರಂತೆ ನಾನು ಈಚೆ ಬಂದು ಏನಾಯ್ತು ಎಂದು ಕೇಳಿದಾಗ ಅವಳು ಸ್ವಲ್ಪ ನಡುಗುವ ಧ್ವನಿಯಲ್ಲೇ ಅಮ್ಮ ತಲೆನೋವು ಎಂದು ಕುಸಿದುಬಿದ್ದರು ಎಂದು ಹೇಳಿದಳು. ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಗಾಬರಿಯಿಂದ ಅಳುವೇ ಬಂದಿತ್ತು. ಆದರೆ ನನ್ನ ಅಳು ಬೇರೆಯವರಿಗೆ ಕಾಣಿಸದಿರಲಿ ಎಂದು ತುಂಬಾ ಕಷ್ಟಪಟ್ಟೆ. ಬಹುಶಃ ಅದು ಅಗತ್ಯವಿರಲಿಲ್ಲವೇನೋ.

ನಾನು ಬಳಿಕ ನನ್ನ ಕೊಠಡಿಗೆ ತೆರಳಿ ಒಬ್ಬನೇ ಅಳುತ್ತಾ ಕೂತಿದ್ದೆ. ಕೆಲವು ಕ್ಷಣಗಳ ನಂತರ ತಂಡದ ಫಿಸಿಯೋ ನಾನು ಏನು ಮಾಡುತ್ತಿದ್ದೇನೆ ಎಂದು ನೋಡಲು ರೂಂಗೆ ಬಂದರು. ಅವರ ಹಿಂದೆಯೇ ರೋಹಿತ್, ರಾಹುಲ್ ದ್ರಾವಿಡ್ ಬಂದರು. ನನ್ನ ಸ್ಥಿತಿ ನೋಡಿ ಏನಾಯ್ತು ಎಂದು ಕೇಳಿದರು. ಕೊನೆಗೆ ನನ್ನ ತಾಯಿಯ ಪರಿಸ್ಥಿತಿ ಹೇಳಿದೆ.

ನನಗೆ ಸಂದಿಗ್ಧತೆ ಕಾಡುತ್ತಿತ್ತು. ಒಂದು ಕಡೆ ಪಂದ್ಯ ಅತ್ತಲೂ ಅಲ್ಲ, ಇತ್ತಲೂ ಅಲ್ಲ ಎನ್ನುವಂತಿತ್ತು. ಇನ್ನೊಂದು ಕಡೆಗೆ ತಾಯಿ. ನಾನು ಪಂದ್ಯ ಬಿಟ್ಟು ಹೋದರೆ ಈ ಕ್ಷಣದಲ್ಲಿ ತಂಡಕ್ಕೆ 10 ಆಟಗಾರರು ಮಾತ್ರ. ಒಬ್ಬ ಬೌಲರ್ ನ ಕೊರತೆ ಕಾಡುತ್ತದೆ ಎನಿಸಿತು. ಹೋಗದೇ ಇದ್ದರೆ ನನ್ನ ಅಮ್ಮನನ್ನು ಕಳೆದುಕೊಂಡರೆ ಎಂಬ ಭಯ.

ಆ ಕ್ಷಣದಲ್ಲಿ ನನಗೆ ರೋಹಿತ್, ರಾಹುಲ್ ದ್ರಾವಿಡ್ ಮನೆಗೆ ತೆರಳಲು ಹೇಳಿದರು. ನಾನು ವಿಮಾನಕ್ಕಾಗಿ ಹುಡುಕಾಡುತ್ತಿದ್ದೆ. ಆದರೆ ರಾಜ್ ಕೋಟ್ ನಿಂದ ಅಷ್ಟೊತ್ತಿಗೆ ವಿಮಾನವಿರಲಿಲ್ಲ. ರೋಹಿತ್ ನನಗಾಗಿ ಚಾರ್ಟರ್ಡ್ ವಿಮಾನವನ್ನು ಅರೇಂಜ್ ಮಾಡಲು ಯಾರಿಗೋ ಕರೆ ಮಾಡಿ ವ್ಯವಸ್ಥೆ ಮಾಡಿಕೊಟ್ಟರು. ಚೇತೇಶ್ವರ ಪೂಜಾರ ಕೂಡಾ ಕೈ ಜೋಡಿಸಿದ್ದರು. ಇವರಿಬ್ಬರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಅಷ್ಟೇ ಅಲ್ಲ, ತಂಡದಲ್ಲಿ ಇದ್ದಿದ್ದು ಇಬ್ಬರೇ ಫಿಸಿಯೋಗಳು. ಅವರಲ್ಲಿ ಒಬ್ಬರನ್ನು ರೋಹಿತ್ ನನ್ನ ಜೊತೆಗೇ ಚೆನ್ನೈಗೆ ಹೋಗಲು ಸೂಚಿಸಿದರು. ನಾನು ಚೆನ್ನೈ ತಲುಪುವವರೆಗೂ ರೋಹಿತ್ ನನ್ನ ಜೊತೆಗಿದ್ದ ಫಿಸಿಯೋಗೆ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸುತ್ತಲೇ ಇದ್ದರು. ರೋಹಿತ್ ಗೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್ 2024: ಮುಂಬೈ ಇಂಡಿಯನ್ಸ್ ಹೆಡೆಮುರಿ ಕಟ್ಟಿದ ಎಲ್ಲಿಸ್ ಪೆರ್ರಿ