ದುಬೈ: ಇಂದು ನಡೆಯುತ್ತಿರುವ ಭಾರತ-ನಮೀಬಿಯಾ ನಡುವಿನ ಟಿ20 ವಿಶ್ವಕಪ್ ನ ಲೀಗ್ ಪಂದ್ಯ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಪಾಲಿಗೆ ವಿದಾಯ ಪಂದ್ಯ.
ಇಂದಿನ ಪಂದ್ಯದ ಬಳಿಕ ಅವರು ಕೋಚ್ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ. ಸುದೀರ್ಘ ನಾಲ್ಕು ವರ್ಷಗಳ ಕಾಲ ಟೀಂ ಇಂಡಿಯಾಗೆ ಸೇವೆ ಸಲ್ಲಿಸಿದ ಬಳಿಕ ಮಾತನಾಡಿರುವ ರವಿಶಾಸ್ತ್ರಿ, ಕೋಚ್ ತಂಡಕ್ಕೆ ಬಂದಾಗ ಏನು ಸಾಧಿಸಬೇಕೆಂದುಕೊಂಡಿದ್ದೇನೋ ಅದನ್ನು ಸಾಧಿಸಿದ್ದೇನೆ ಎಂದಿದ್ದಾರೆ.
ನಾನೀಗ ಸುಸ್ತಾಗಿದ್ದೇನೆ. ನನ್ನ ವಯಸ್ಸೂ ಇದಕ್ಕೆ ಕಾರಣ. ಈ ತಂಡದಲ್ಲಿ ವಿರಾಟ್ ಕೊಹ್ಲಿ ಇನ್ನೂ ಇದ್ದಾರೆ. ಅವರ ಸೇವೆ ತಂಡಕ್ಕೆ ಮುಖ್ಯವಾಗಲಿದೆ. ಆಟಗಾರರೂ ಬಯೋ ಬಬಲ್ ವಾತಾವರಣದಿಂದ ಸಾಕಷ್ಟು ಬಳಲಿದ್ದಾರೆ. ಐಪಿಎಲ್ ಮತ್ತು ವಿಶ್ವಕಪ್ ನಡುವೆ ಸ್ವಲ್ಪ ಸಮಯದ ಅಂತರವಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದಿದ್ದಾರೆ.
ಇನ್ನು, ಮುಂದಿನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಬಗ್ಗೆ ಹೊಗಳಿದ ಶಾಸ್ತ್ರಿ, ಅವರು ಶ್ರೇಷ್ಠ ತಂಡದ ನಾಯಕರಾಗಿ ತಮ್ಮನ್ನು ತಾವು ಸಾಬೀತುಪಡಿಸಿದವರು, ಈಗ ಕೋಚ್ ಆಗಿ ಅವರು ಆ ಸಾಧನೆಯನ್ನು ಇನ್ನಷ್ಟು ಹೆಚ್ಚಿಸುವ ಕೆಲಸವಷ್ಟೇ ಬಾಕಿಯಿದೆ ಎಂದಿದ್ದಾರೆ.