Publish Date: Mon, 25 Dec 2023 (10:33 IST)
Updated Date: Mon, 25 Dec 2023 (10:35 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.
ಡಿಸೆಂಬರ್ 26 ರಿಂದ ಭಾರತ ಮತ್ತು ದ.ಆಫ್ರಿಕಾ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯ ಸೆಂಚೂರಿಯನ್ ಮೈದಾನದಲ್ಲಿ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಉಭಯ ತಂಡಗಳು ಸಿದ್ಧತೆ ನಡೆಸಿವೆ.
ಈ ನಡುವೆ ಈ ಪಂದ್ಯದ ಮೊದಲ ಎರಡು ದಿನ ಮಳೆ ಬರುವ ಸಾಧ‍್ಯತೆ ಇದೆ ಎಂದು ಹವಾಮಾನ ವರದಿ ಹೇಳುತ್ತಿದೆ. ಎರಡು ದಿನಗಳ ಬಳಿಕ ಇಲ್ಲಿ ತಾಪಮಾನ 20 ಡಿಗ್ರಿಗೆ ಇಳಿಕೆಯಾಗಬಹುದು ಎನ್ನಲಾಗಿದೆ.
ಸೆಂಚೂರಿಯನ್ ಪಿಚ್ ವೇಗಿಗಳಿಗೆ ನೆರವಾಗಲಿದ್ದು, ಮಳೆ ಬಂದು ಪಿಚ್ ಒದ್ದೆಯಾದರೆ ಬ್ಯಾಟಿಂಗ್ ಮತ್ತಷ್ಟು ಕಷ್ಟವಾಗಬಹುದು. ಹೀಗಾಗಿ ಮೊದಲ ಟೆಸ್ಟ್ ಪಂದ್ಯಕ್ಕೆ ಆತಂಕದ ಕಾರ್ಮೋಡ ಕವಿದಿದೆ. ಆಫ್ರಿಕಾ ನೆಲದಲ್ಲಿ ಇದುವರೆಗೆ ಭಾರತ ಟೆಸ್ಟ್ ಸರಣಿ ಗೆದ್ದಿಲ್ಲ. ಜೊತೆಗೆ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಈ ಸರಣಿ ಗೆಲ್ಲುವುದು ಭಾರತಕ್ಕೆ ಮಹತ್ವದ್ದಾಗಲಿದೆ.