Publish Date: Thu, 24 Jun 2021 (11:24 IST)
Updated Date: Thu, 24 Jun 2021 (09:47 IST)
ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ನ ಆರಂಭದಿಂದ ಕೊನೆಯವರೆಗೂ ಮಳೆ ಶಾಪವಾಗಿ ಕಾಡಿತು. ಇದರಿಂದಾಗಿ ಆಟದ ರಸದೌತಣವೇ ಹಾಳಾಯಿತು ಎನ್ನುವ ಬೇಸರ ಅಭಿಮಾನಿಗಳದ್ದು.
ಆದರೆ ಟೀಂ ಇಂಡಿಯಾಗೆ ಐಸಿಸಿಯ ಕೂಟದ ಫೈನಲ್ಸ್ ನಲ್ಲಿ ಮಳೆ ಕಾಟ ಕೊಟ್ಟಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು 2002 ರಲ್ಲಿ ಗಂಗೂಲಿ ನಾಯಕತ್ವದಲ್ಲಿ ಭಾರತ-ಶ್ರೀಲಂಕಾ ಐಸಿಸಿ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಯಾಯಿತು. ಆ ಕೂಟದಲ್ಲಿ ಅದ್ಭುತ ಫಾರ್ಮ್ ನಲ್ಲಿದ್ದ ಭಾರತ ಏಕೈಕ ಚಾಂಪಿಯನ್ ಆಗಿ ಹೊರಹೊಮ್ಮುವ ಎಲ್ಲಾ ಸಾಧ‍್ಯತೆಯಿತ್ತು. ಆದರೆ ಮಳೆಯಿಂದಾಗಿ ಪಂದ್ಯ ಪೂರ್ತಿಯಾಗದೇ ಭಾರತ-ಲಂಕಾ ಜಂಟಿ ವಿಜಯಿಗಳೆಂದು ಘೋಷಿಸಬೇಕಾಯಿತು. ಅಂದೂ ಹೆಚ್ಚು ಅನ್ಯಾಯವಾಗಿದ್ದು ಭಾರತಕ್ಕೆ.
ಇದಾದ ಬಳಿಕ 2004 ರಲ್ಲಿ ಮತ್ತೆ ಗಂಗೂಲಿ ನಾಯಕತ್ವದಲ್ಲಿ ಭಾರತ ಏಕದಿನ ವಿಶ್ವಕಪ್ ಫೈನಲ್ ಗೆ ಲಗ್ಗೆಯಿಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಭರ್ಜರಿ ಮೊತ್ತ ಕಲೆ ಹಾಕಿತು. ಆದರೆ ಇದನ್ನು ಭಾರತ ಬೆನ್ನಟ್ಟುವಾಗ ಮಳೆ ಕಾಟ ಕೊಟ್ಟಿತು. ಅಂತಿಮವಾಗಿ ಭಾರತ ಸೋಲುಂಡಿತು.
ಕಳೆದ ಭಾರತ-ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲೂ ಮಳೆ ಎಂಟ್ರಿ ಕೊಟ್ಟಿತ್ತು. ಈ ಪಂದ್ಯವನ್ನೂ ಭಾರತ ಸೋತಿತ್ತು. ಅಂತೂ ಮಳೆ ಎನ್ನುವುದು ಐಸಿಸಿ ಕೂಟಗಳಲ್ಲಿ ಭಾರತದ ಪಾಲಿಗೆ ಶಾಪವಾಗಿದೆ.