Publish Date: Tue, 23 Jul 2024 (14:01 IST)
Updated Date: Tue, 23 Jul 2024 (14:04 IST)
ಮುಂಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ನಿವೃತ್ತಿಯಾಗಿರುವ ರಾಹುಲ್ ದ್ರಾವಿಡ್ ಮುಂದಿನ ದಿನಗಳಲ್ಲಿ ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ಪರ ಕೋಚ್ ಆಗಬಹುದು ಎಂದು ಅಭಿಮಾನಿಗಳು ಆಸೆಯಿಂದ ಕಾಯುತ್ತಿದ್ದರು. ಆದರೆ ಅವರಿಗೆ ನಿರಾಸೆಯಾಗುವ ಎಲ್ಲಾ ಲಕ್ಷಣವಿದೆ.
ರಾಹುಲ್ ದ್ರಾವಿಡ್ ಕೋಚ್ ಆಗಿ ಕೆಎಲ್ ರಾಹುಲ್ ನಾಯಕರಾಗಿ ಈ ಬಾರಿ ಆರ್ ಸಿಬಿ ಕಣಕ್ಕಿಳಿದರೆ ಎಷ್ಟು ಚೆನ್ನ ಎಂದು ಅಭಿಮಾನಿಗಳು ಆಸೆಪಟ್ಟಿದ್ದರು. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ಇನ್ನು ಆರ್ ಸಿಬಿಗೆ ಕೋಚ್ ಆಗಿ ಬನ್ನಿ ಎಂದು ದ್ರಾವಿಡ್ ರನ್ನು ಅಭಿಮಾನಿಗಳು ಕರೆಯುತ್ತಲೇ ಇದ್ದರು.
ಆದರೆ ಮೂಲಗಳ ಪ್ರಕಾರ ಮುಂದಿನ ಐಪಿಎಲ್ ನಲ್ಲಿ ದ್ರಾವಿಡ್ ಕೋಚ್ ಆಗುವುದು ಖಚಿತ. ಆದರೆ ಆರ್ ಸಿಬಿ ತಂಡಕ್ಕಂತೂ ಅಲ್ಲ. ಬದಲಾಗಿ ಈ ಹಿಂದೆ ತಾವು ನಾಯಕ, ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ರಾಜಸ್ಥಾನ್ ರಾಯಲ್ಸ್ ಗೆ ಮತ್ತೆ ಕೋಚ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ರಾಜಸ್ಥಾನ್ ರಾಯಲ್ಸ್ ಪರ ನಾಯಕರಾಗಿ ದ್ರಾವಿಡ್ ಒಮ್ಮೆ ಐಪಿಎಲ್ ಪ್ಲೇ ಆಫ್ ಗೆ ಮತ್ತೊಮ್ಮೆ ಚಾಂಪಿಯನ್ಸ್ ಲೀಗ್ ಫೈನಲ್ ಗೆ ತಂಡವನ್ನು ಕರೆದೊಯ್ದಿದ್ದರು. ರಾಜಸ್ಥಾನ್ ತಂಡದ ಪರ 40 ಪಂದ್ಯಗಳಿಗೆ ನಾಯಕರಾಗಿದ್ದ ದ್ರಾವಿಡ್ 23 ಗೆಲುವುಗಳೊಂದಿಗೆ ರಾಜಸ್ಥಾನ್ ಫ್ರಾಂಚೈಸಿಯ ಯಶಸ್ವೀ ನಾಯಕ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಎರಡು ಸೀಸನ್ ಗಳಲ್ಲಿ ರಾಜಸ್ಥಾನ್ ತಂಡದ ಕೋಚ್ ಆಗಿದ್ದ ದ್ರಾವಿಡ್ ಬಳಿ ಅಂಡರ್ 19 ತಂಡದ ಕೋಚ್ ಹುದ್ದೆಗಾಗಿ ಐಪಿಎಲ್ ನಿಂದ ಹೊರನಡೆದಿದ್ದರು.