Publish Date: Tue, 16 Jul 2024 (13:31 IST)
Updated Date: Tue, 16 Jul 2024 (13:34 IST)
ದೆಹಲಿ: ಈ ಬಾರಿ ಐಪಿಎಲ್ ಗೆ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಹಲವು ಆಟಗಾರರು ಹರಾಜಿಗೊಳಪಡಲಿದ್ದಾರೆ. ಈ ನಡುವೆ ರಿಷಬ್ ಪಂತ್ ರನ್ನು ಡೆಲ್ಲಿ ತಂಡ ಕೈ ಬಿಡಲಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ರಿಷಬ್ ಪಂತ್ 2021 ರಲ್ಲಿ ಡೆಲ್ಲಿ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. 2023 ರ ಐಪಿಎಲ್ ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಕಾರಣ ಇಡೀ ಸೀಸನ್ ಆಡಿರಲಿಲ್ಲ. ಹಾಗಿದ್ದರೂ ಡೆಲ್ಲಿ ತಂಡ ರಿಷಬ್ ಗೆ ಪೂರ್ಣ ವೇತನ ನೀಡಿ ಸಾಕಷ್ಟು ಬೆಂಬಲ ನೀಡಿತು.
ಬಳಿಕ 2024 ರ ಐಪಿಎಲ್ ಮೂಲಕ ರಿಷಬ್ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಿದ್ದರು. ಆದರೆ ಈ ಐಪಿಎಲ್ ನಲ್ಲೂ ತಂಡದ ಪ್ರದರ್ಶನ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಇದುವರೆಗೆ ರಿಷಬ್ ನಾಯಕತ್ವದಲ್ಲಿ ಡೆಲ್ಲಿ ಫೈನಲ್ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಐಪಿಎಲ್ ಮೆಗಾ ಹರಾಜು ವೇಳೆ ರಿಷಬ್ ರನ್ನು ತಂಡದಿಂದ ಕೈ ಬಿಡುವ ಬಗ್ಗೆ ಚಿಂತನೆ ನಡೆದಿದೆಯಂತೆ.
ರಿಷಬ್ ರನ್ನು ಮೆಗಾ ಹರಾಜಿಗೆ ಬಿಡುವ ಬಗ್ಗೆ ತಂಡದಲ್ಲಿ ಚಿಂತನೆ ನಡೆದಿದೆ. ಇತ್ತೀಚೆಗಷ್ಟೇ ಕೋಚ್ ರಿಕಿ ಪಾಂಟಿಂಗ್ ರನ್ನು ಡೆಲ್ಲಿ ತಂಡ ಕಿತ್ತು ಹಾಕಿತ್ತು. ಅದರ ಬೆನ್ನಲ್ಲೇ ರಿಷಬ್ ಕೂಡಾ ರಿಲೀಸ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತಂಡವನ್ನು ಹೊಸದಾಗಿ ರಚನೆ ಮಾಡಲು ಡೆಲ್ಲಿ ತಂಡ ಯೋಜನೆ ಹಾಕಿಕೊಂಡಿದೆಯಂತೆ.