Publish Date: Wed, 11 May 2022 (20:42 IST)
Updated Date: Wed, 11 May 2022 (20:44 IST)
ಮುಂಬೈ: ರಾಹುಲ್ ದ್ರಾವಿಡ್ ಎಂದರೆ ಎಂಥಾ ವಿನಯವಂತ ಎಂಬುದಕ್ಕೆ ಈ ಘಟನೆ ನಿದರ್ಶನ. ಮಾಸ್ಕ್ ಹಾಕಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ರಾಹುಲ್ ದ್ರಾವಿಡ್ ನಡೆದುಕೊಂಡ ರೀತಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರಿನಲ್ಲಿ ಇಂದು ಜಿ.ಆರ್. ವಿಶ್ವನಾಥ್ ಅವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭವಿತ್ತು. ಈ ಕಾರ್ಯಕ್ರಮಕ್ಕೆ ದ್ರಾವಿಡ್ ಅತಿಥಿಯಾಗಿ ಬಂದಿದ್ದರು. ಆದರೆ ದ್ರಾವಿಡ್ ಎಂಥಾ ಸರಳ ವ್ಯಕ್ತಿ ಎಂದರೆ ಮಾಸ್ಕ್ ಹಾಕಿಕೊಂಡು ಕೊನೆಯ ಸೀಟ್ ನಲ್ಲಿ ಬಂದು ಕೂತಿದ್ದನ್ನು ಯಾರೂ ಗಮನಿಸಲೇ ಇಲ್ಲ!
ದ್ರಾವಿಡ್ ಕೂಡಾ ತಾವಾಗಿಯೇ ಎಲ್ಲರ ಗಮನ ಸೆಳೆಯುವ ಬದಲು ಸುಮ್ಮನೇ ಹಿಂದಿನ ಸೀಟ್ ನಲ್ಲಿ ಕೂತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ವತಃ ವಿಶ್ವನಾಥ್ ಅವರು ದ್ರಾವಿಡ್ ರನ್ನು ಗಮನಿಸಿ ಖುದ್ದಾಗಿ ಹೋಗಿ ಮಾತನಾಡಿಸಿ ಮುಂದೆ ಬಂದು ಕೂರಲು ಒತ್ತಾಯಿಸಿದರು.
ಒತ್ತಾಯದ ಮೇರೆಗೆ ಮುಂದೆ ಬಂದು ಕುಳಿತ ದ್ರಾವಿಡ್ ತಮ್ಮ ಬಳಿ ಆಟೋಗ್ರಾಫ್ ಕೇಳಿದವರಿಗೆ ಕೊಟ್ಟು ಮತ್ತೆ ತಾವು ಸೈಲಂಟಾಗಿ ಕೂತು ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ವಿಚಾರವನ್ನು ಕಾಶಿ ಎಂಬವರು ತಮ್ಮ ಟ್ವಿಟರ್ ಪುಟದಲ್ಲಿ ಫೋಟೋ ಸಮೇತ ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ದ್ರಾವಿಡ್ ಸರಳತೆಯನ್ನು ಕೊಂಡಾಡಿದ್ದಾರೆ.