Publish Date: Fri, 01 Feb 2019 (09:45 IST)
Updated Date: Fri, 01 Feb 2019 (09:46 IST)
ಮುಂಬೈ: ಟೀಂ ಇಂಡಿಯಾದಲ್ಲಿ ಕಳಪೆ ಫಾರ್ಮ್ ನಿಂದಾಗಿ ಸ್ಥಾನ ಕಳೆದುಕೊಂಡು ಇದೀಗ ಎ ತಂಡದ ಪರ ಆಡುತ್ತಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಬಗ್ಗೆ ‘ವಾಲ್’ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ಕಳಪೆ ಫಾರ್ಮ್ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಮರಳಿ ಲಯಕ್ಕೆ ಬರಲು ಅವರನ್ನು ಎ ತಂಡದಲ್ಲಿ ಆಡಿಸಲಾಗುತ್ತಿದೆ. ಆದರೆ ಅಲ್ಲೂ ರಾಹುಲ್ ದೊಡ್ಡ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿಲ್ಲ. ಈ ಹಿನ್ನಲೆಯಲ್ಲಿ ಗುರು ರಾಹುಲ್ ದ್ರಾವಿಡ್ ರನ್ನು ಕೇಳಿದಾಗ ನನಗೆ ಕೆಎಲ್ ಫಾರ್ಮ್ ಬಗ್ಗೆ ದೊಡ್ಡ ಚಿಂತೆಯಿಲ್ಲ ಎಂದಿದ್ದಾರೆ.
‘ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಶತಕ ಗಳಿಸುವುದು ಸಾಮಾನ್ಯ ಮಾತಲ್ಲ. ಅದನ್ನು ಮಾಡಿರುವ ಕೆಎಲ್ ಈಗಾಗಲೇ ತನ್ನ ಸಾಮರ್ಥ್ಯ ನಿರೂಪಿಸಿದ್ದಾರೆ. ಹೀಗಾಗಿ ನನಗೆ ಆತನ ಬಗ್ಗೆ ದೊಡ್ಡ ಚಿಂತೆಯಿಲ್ಲ. ಕೆಎಲ್ ಈಗ ನಾಲ್ಕು ದಿನಗಳ ಪಂದ್ಯವಾಡುತ್ತಿದ್ದಾರೆ. ತಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಯಶಸ್ವಿಯಾಗುವೆ ಎನ್ನುವುದನ್ನು ಅವರು ಸಾಬೀತುಪಡಿಸಿದ್ದಾರೆ’ ಎಂದು ದ್ರಾವಿಡ್ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಎ ತಂಡದ ಪರ ಆಡುತ್ತಿರುವ ಕೆಎಲ್ ರಾಹುಲ್, ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗುತ್ತಿದ್ದಾರೆ. ಇಲ್ಲಿ ಅವರು ಫಾರ್ಮ್ ಕಂಡುಕೊಂಡರೆ ಮಾತ್ರ ಮತ್ತೆ ಟೀಂ ಇಂಡಿಯಾದಲ್ಲಿ ಅವಕಾಶ ದೊರಕಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ