Publish Date: Thu, 30 Nov 2023 (09:30 IST)
Updated Date: Thu, 30 Nov 2023 (09:38 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಯೋಜಿಸಿದ್ದ RCBXLeaders ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾಗಿಯಾಗಿದ್ದರು.
ಈ ಕಾರ್ಯಕ್ರಮದ ಫೋಟೋಗಳನ್ನು ಆರ್ ಸಿಬಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ದ್ರಾವಿಡ್ ಮಾತ್ರವಲ್ಲದೆ, ಅಥ್ಲೆಟ್ ನೀರಜ್ ಚೋಪ್ರಾ, ಆರ್ ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧನಾ, ಫುಟ್ಬಾಲರ್ ಅಲೆಸ್ಸಾಂಡ್ರೋ ಡೆಲ್ ಪಿಯರೊ ಸೇರಿದಂತೆ ಕ್ರೀಡಾ ಲೋಕದ ಘಟಾನುಘಟಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ದ್ರಾವಿಡ್ ಮತ್ತು ಸ್ಮೃತಿ ಮಂಧನಾ ಮಾತುಕತೆ ನಡೆಸುತ್ತಿರುವ ವಿಡಿಯೋವನ್ನು ನೋಡಿದ ಆರ್ ಸಿಬಿ ಫ್ಯಾನ್ಸ್, ದ್ರಾವಿಡ್ ಸರ್ ನೀವು ಆರ್ ಸಿಬಿಗೆ ಬ್ಯಾಟಿಂಗ್ ಕೋಚ್ ಆಗಿ ಬನ್ನಿ ಎಂದು ಆಗ್ರಹಿಸಿದ್ದಾರೆ.
ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕೋಚ್ ಅವಧಿ ಮುಗಿದ ಬೆನ್ನಲ್ಲೇ ದ್ರಾವಿಡ್ ಐಪಿಎಲ್ ತಂಡವೊಂದರ ಜೊತೆ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಬಿಸಿಸಿಐ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ಪ್ರಕಟಿಸಿದ ಮೇಲೆ ಆ ಊಹಾಪೋಹಗಳು ಕೊನೆಯಾಗಿದೆ.
ಆದರೆ ದ್ರಾವಿಡ್ ಆರ್ ಸಿಬಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನೋಡಿ ಫ್ಯಾನ್ಸ್ ಭವಿಷ್ಯದಲ್ಲಾದರೂ ಅವರು ತಂಡದ ಕೋಚ್ ಆಗಲಿ ಎಂದು ಆಸೆಪಟ್ಟಿದ್ದಾರೆ.