ಕರಾಚಿ: ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಂಭೀರ ಗಾಯಗೊಂಡ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ ರಕ್ತ ಸುರಿಸುತ್ತಲೇ ಮೈದಾನದಿಂದ ಹೊರ ನಡೆದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯದ ವೇಳೆ ಘಟನೆ ನಡೆದಿದೆ. ಕಿವೀಸ್ ನೀಡಿದ್ದ 331 ರನ್ ಗಳ ಗುರಿಯನ್ನು ಪಾಕ್ ಬೆನ್ನತ್ತಿತ್ತು. ಈ ವೇಳೆ ಪಾಕ್ ಬ್ಯಾಟಿಗ ಖುಷ್ ದಿಲ್ ಶಾ ಹೊಡೆದ ಚೆಂಡನ್ನು ರಚಿನ್ ರವೀಂದ್ರ ಕ್ಯಾಚ್ ಹಿಡಿಯಲು ಪ್ರಯತ್ನಿಸಿದರು.
ಈ ವೇಳೆ ಫ್ಲಡ್ ಲೈಟ್ ಕಣ್ಣಿಗೆ ಕುಕ್ಕಿದಂತಾಗಿ ಅವರು ಆಯತಪ್ಪಿ ಕೆಳಕ್ಕೆ ಬಿದ್ದರು. ಆಗ ಅವರ ಹಣೆಗೆ ಪೆಟ್ಟು ಬಿದ್ದಿದೆ. ಕೆಲವು ಕಾಲ ಕುಸಿದು ಕುಳಿತ ರಚಿನ್ ಬಳಿಕ ಸಾವರಿಸಿಕೊಂಡು ಎದ್ದು ಕೂತಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಫಿಸಿಯೋ ಅವರನ್ನು ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಈ ವೇಳೆ ಅವರ ಹಣೆಯಿಂದ ರಕ್ತ ಸೋರುತ್ತಿತ್ತು.
ರಚಿನ್ ಬಿದ್ದ ರಭಸ ಪ್ರೇಕ್ಷಕರಿಗೂ ಕೆಲವು ಕಾಲ ಗಾಬರಿ ಉಂಟು ಮಾಡಿತ್ತು. ಪ್ರೇಕ್ಷಕರು ಎದ್ದು ನಿಂತು ಆತನಿಗೆ ಏನಾಯ್ತೋ ಎಂದು ಗಾಬರಿಯಿಂದ ನೋಡುತ್ತಿದ್ದರು. ಇನ್ನು ರಚಿನ್ ಅವಸ್ಥೆ ನೋಡಿ ನೆಟ್ಟಿಗರೂ ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ಜೊತೆಗೆ ಕೆಲವರು ಪಾಕಿಸ್ತಾನದ ಮೈದಾನದ ವ್ಯವಸ್ಥೆ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.