ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಮಾಡಿದ ಅವಮಾನಕ್ಕೆ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಪ್ರಶಸ್ತಿ ಸಮಾರಂಭದಿಂದ ಗಾಯಬ್ ಆಗಿದ್ದಾರೆ.
ಈ ಪಂದ್ಯದಲ್ಲಿ ಭಾರತ ಆಡಿದ್ದೇ ದೊಡ್ಡ ವಿಚಾರ. ಸಾಕಷ್ಟು ಬಹಿಷ್ಕಾರದ ಬೆದರಿಕೆ ನಡುವೆಯೂ ವೃಥಾ ಪಾಕಿಸ್ತಾನಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂಬ ಕಾರಣಕ್ಕೆ ಮನಸ್ಸಿಲ್ಲದಿದ್ದರೂ ಟೀಂ ಇಂಡಿಯಾ ಈ ಪಂದ್ಯವನ್ನು ಆಡಿತ್ತು.
ಆದರೆ ಪಹಲ್ಗಾಮ್ ದಾಳಿಯ ಆಕ್ರೋಶ ಆಟಗಾರರಲ್ಲೂ ಇತ್ತು. ಈ ಪಂದ್ಯದಲ್ಲಿ ಯಾವುದೇ ಭಾವನೆಗಳನ್ನು ತೋರ್ಪಡಿಸದೇ ಆಡಿ ಎಂದು ಕೋಚ್ ಗೌತಮ್ ಗಂಭೀರ್ ಮೊದಲೇ ಹೇಳಿದ್ದರು. ಅದರಂತೆ ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಎದುರಾಳಿಗಳ ಕಡೆಗೆ ಕಣ್ಣೆತ್ತಿಯೂ ನೋಡದೇ ರೋಬೋಟ್ ಗಳಂತೆ ತಮ್ಮ ಕರ್ತವ್ಯ ಮುಗಿಸಿ ಮೈದಾನ ತೊರೆದಿದ್ದಾರೆ.
ಎಷ್ಟೆಂದರೆ ಪಂದ್ಯಕ್ಕೆ ಮೊದಲು ಮತ್ತು ನಂತರವೂ ಪಾಕ್ ಆಟಗಾರರ ಕೈಕುಲುಕಲು ಟೀಂ ಇಂಡಿಯಾ ಆಟಗಾರರು ಹೋಗಲಿಲ್ಲ. ಪಾಕ್ ಆಟಗಾರರು ಮಾತ್ರ ಮೈದಾನದಲ್ಲಿ ಕಾಯುತ್ತಾ ನಿಂತಿದ್ದರು. ಟೀಂ ಇಂಡಿಯಾದಿಂದ ಅವಮಾನಿತರಾದ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಬಳಿಕ ಪ್ರಶಸ್ತಿ ಸಮಾರಂಭಕ್ಕೇ ಬರಲಿಲ್ಲ. ಹೀಗಾಗಿ ಕೇವಲ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಪಂದ್ಯಶ್ರೇಷ್ಠ ಪುರಸ್ಕೃತ ಕುಲದೀಪ್ ಯಾದವ್ ರನ್ನು ಮಾತ್ರ ಮಾತನಾಡಿಸಿ ಸಮಾರಂಭ ಕೊನೆಗೊಳಿಸಲಾಯಿತು.