ದುಬೈ: ಪಹಲ್ಗಾಮ್ ದಾಳಿಗೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿತ್ತು. ಇದೀಗ ಟೀಂ ಇಂಡಿಯಾವೂ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ಮೂಲಕ ಆಪರೇಷನ್ ಸಿಂಧೂರ್ ಮಾಡಿ ಪಾಕ್ ಗೆ 7 ವಿಕೆಟ್ ಗಳ ಸೋಲುಣಿಸಿದೆ ಸೇಡು ತೀರಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು. ಈ ಗೆಲುವಿನ ಮೊತ್ತ ಬೆನ್ನತ್ತಿದ ಭಾರತಕ್ಕೆ ಅಭಿಷೇಕ್ ಶರ್ಮಾ ಅಬ್ಬರದ ಆರಂಭ ನೀಡಿದರು. ಆದರೆ ಇನ್ನೊಬ್ಬ ಆರಂಭಿಕ ಶುಭಮನ್ ಗಿಲ್ 2 ಬೌಂಡರಿ ಸಿಡಿಸಿ 10 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಹಾಗಿದ್ದರೂ ಅಭಿಷೇಕ್ ಕೇವಲ 13 ಎಸೆತಗಳಿಂದ 4 ಬೌಂಡರಿ, 2 ಸಿಕ್ಸರ್ ಸಹಿತ 30 ರನ್ ಗಳಿಸಿ ಔಟಾದರು.
ಈ ಎರಡು ವಿಕೆಟ್ ಕಳೆದುಕೊಂಡ ಬಳಿಕ ಜೊತೆಯಾದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮ ಎಚ್ಚರಿಕೆಯ ಜೊತೆಗೆ ಅವಕಾಶ ಸಿಕ್ಕಾಗ ಭರ್ಜರಿ ಹೊಡೆತಗಳಿಗೆ ಕೈ ಹಾಕುವ ಮೂಲಕ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿದರು. ಸೂರ್ಯಕುಮಾರ್ ಯಾದವ್ ಅಜೇಯ 47 ರನ್ ಗಳಿಸಿದರೆ ತಿಲಕ್ ವರ್ಮ 31 ರನ್ ಗಳಿಸಿ ಔಟಾದರು. ಕೊನೆ ಹಂತದಲ್ಲಿ ಬಂದ ಶಿವಂ ದುಬೆ 10 ರನ್ ಗಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ 15.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ಗೆಲುವು ಕಂಡಿತು.