ಅಹಮ್ಮದಾಬಾದ್: ಏಕದಿನ ವಿಶ್ವಕಪ್ ಕ್ರಿಕೆಟ್ ನ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ 9 ವಿಕೆಟ್ ಗಳ ದಾಖಲೆಯ ಗೆಲುವು ಪಡೆದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ಆರಂಭದಲ್ಲೇ ಆರಂಬಿಕ ವಿಲ್ ಯಂಗ್ ವಿಕೆಟ್ ಕಳೆದುಕೊಂಡರೂ ಬಳಿಕ ಒಂದೇ ಒಂದು ವಿಕೆಟ್ ನಷ್ಟವಿಲ್ಲದೇ 36.2 ಓವರ್ ಗಳಲ್ಲೇ 1 ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ಕಿವೀಸ್ ಪರ ಆರಂಭಿಕ ಡೆವನ್ ಕಾನ್ವೇ ಅಜೇಯ 152 ಮತ್ತು ಭಾರತೀಯ ಮೂಲದ ರಚಿನ್ ರವೀಂದ್ರ ಅಜೇಯ 123 ರನ್ ಗಳಿಸಿದರು. ಇಬ್ಬರೂ ಮುರಿಯದ ಎರಡನೇ ವಿಕೆಟ್ ಗೆ 273 ರನ್ ಗಳಿಸಿದರು.
ಇದು ಕಿವೀಸ್ ಪಾಲಿಗೆ ದಾಖಲೆಯ ಗೆಲುವಾಯಿತು. ವಿಶ್ವಕಪ್ ಪಂದ್ಯಾವಳಿಯಲ್ಲಿ ಯಾವುದೇ ವಿಕೆಟ್ ಗೆ ಗರಿಷ್ಠ ರನ್ ಜೊತೆಯಾಟದ ಪಟ್ಟಿಯಲ್ಲಿ ಡೆವನ್-ರಚಿನ್ ರವೀಂದ್ರ ನಾಲ್ಕನೇ ಸ್ಥಾನ ಪಡೆದರು. ಚೊಚ್ಚಲ ವಿಶ್ವಕಪ್ ನಲ್ಲಿ ಶತಕ ಭಾರಿಸಿದ ಕಿರಿಯ ಆಟಗಾರ ಎಂಬ ದಾಖಲೆಯ ಪಟ್ಟಿಯಲ್ಲಿ ರಚಿನ್ ಮೂರನೇ ಸ್ಥಾನ ಪಡೆದರು. ಪ್ರಮುಖ ಆಟಗಾರರ ಗೈರಿನಲ್ಲೂ ಕಿವೀಸ್ ಪಡೆದ ಈ ಭರ್ಜರಿ ಗೆಲುವು ವಿಶೇಷವಾಗಿತ್ತು.