ಕೊಲಂಬೊ: ಶ್ರೀಲಂಕಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ಶೂನ್ಯಕ್ಕೆ ಔಟಾಗಿದ್ದಕ್ಕೆ ಅಭಿಮಾನಿಗಳ ಸಿಟ್ಟು ಕೋಚ್ ಗೌತಮ್ ಗಂಭೀರ್ ಮೇಲೆ ತಿರುಗಿದೆ.
ಹಲವು ದಿನಗಳ ನಂತರ ಕೆಎಲ್ ರಾಹುಲ್ ತಂಡಕ್ಕೆ ಮರಳಿದ್ದರು. ಅವರ ಮೇಲೆ ಅಭಿಮಾನಿಗಳಿಗೆ ಅಪಾರ ನಿರೀಕ್ಷೆಯಿತ್ತು. ಆದರೆ ಎರಡನೇ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿರುವಾಗ ರಾಹುಲ್ ಶೂನ್ಯಕ್ಕೆ ಔಟಾಗಿ ನಿರ್ಗಮಿಸಿದರು. ಅವರು ಔಟಾಗುತ್ತಿದ್ದಂತೇ ಅಭಿಮಾನಿಗಳ ಆಕ್ರೋಶ ಕೋಚ್ ಗಂಭೀರ್ ಮೇಲೆ ತಿರುಗಿತ್ತು.
ಸಾಮಾನ್ಯವಾಗಿ ರಾಹುಲ್ ಏಕದಿನ ಪಂದ್ಯಗಳಲ್ಲಿ ಐದನೇ ಅಥವಾ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದರು. ಆದರೆ ಈಗ ಗಂಭೀರ್ ಕೋಚ್ ಆಗಿರುವ ಟೀಂ ಇಂಡಿಯಾದಲ್ಲಿ ರಾಹುಲ್ ರನ್ನು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗಿಳಿಸಲಾಗಿದೆ. ಇದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.
ಬೌಲರ್ ಗಳನ್ನು ಬ್ಯಾಟಿಗರಾಗಿ, ಬ್ಯಾಟಿಗರನ್ನು ಬೌಲರ್ ಗಳಾಗಿ ಪ್ರಯೋಗ ಮಾಡುವ ಗಂಭೀರ್ ಪ್ರಯೋಗಕ್ಕೆ ರಾಹುಲ್ ಬಲಿಪಶುವಾಗಿದ್ದಾರೆ. ರಾಹುಲ್ ರಂತಹ ಕ್ಲಾಸ್ ಬ್ಯಾಟಿಗರನ್ನು ಇಷ್ಟು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಸಿದ್ದು ಯಾಕೆ? ನಿಮ್ಮ ಈ ಅತಿಯಾದ ಪ್ರಯೋಗವೇ ಕೈ ಸುಟ್ಟುಕೊಳ್ಳುವಂತೆ ಮಾಡುತ್ತಿದೆ ಎಂದು ಗಂಭೀರ್ ಮೇಲೆ ರಾಹುಲ್ ಅಭಿಮಾನಿಗಳು ಕೆಂಡ ಕಾರಿದ್ದಾರೆ.