ಹೈದರಾಬಾದ್: ಕ್ರಿಕೆಟ್ ವೃತ್ತಿ ಜೀವನದಲ್ಲಿ ನೀಡಿದ ಕೊಡುಗೆಗಳನ್ನು ಪರಿಗಣಿಸಿ ತೆಲಂಗಾಣ ಸರ್ಕಾರ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಗೆ ಗೌರವಯುತ ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ ಪಿ) ಹುದ್ದೆ ನೀಡಿದೆ.
ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಗೆ ಗ್ರೂಪ್ 1 ಸರ್ಕಾರೀ ಹುದ್ದೆ ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಇತ್ತೀಚೆಗೆ ಘೋಷಿಸಿದ್ದರು. ಟಿ20 ವಿಶ್ವ ವಿಜೇತ ತಂಡದ ಸದಸ್ಯರೂ ಆಗಿರುವ ಸಿರಾಜ್ ಗೆ ಈಗ ಡಿಎಸ್ ಪಿ ಹುದ್ದೆ ನೀಡಿ ಗೌರವಿಸಲಾಗಿದೆ. ಸ್ವತಃ ತೆಲಂಗಾಣ ಡಿಜಿಪಿ ಅವರೇ ಸಿರಾಜ್ ಗೆ ಅಧಿಕಾರ ನೀಡಿದರು.
ಪೊಲೀಸ್ ಇಲಾಖೆಯಲ್ಲಿ ಡಿಎಸ್ ಪಿ ಹುದ್ದೆ ಎನ್ನುವುದು ಉನ್ನತ ಶ್ರೇಣಿಯ ಹುದ್ದೆಯಾಗಿದೆ. ಈ ಹುದ್ದೆಯಲ್ಲಿರುವವರಿಗೆ ಸರ್ಕಾರದಿಂದ ಒಂದು ಬಂಗಲೆ, ಕಾರು, ಸಹಾಯಕ ಸೇರಿದಂತೆ ಎಲ್ಲಾ ಅನುಕೂಲಗಳೂ ಸಿಗುತ್ತವೆ. ಈಗ ಸಿರಾಜ್ ಕೂಡಾ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಅದನ್ನು ಅವರು ಬಳಸಿಕೊಳ್ಳುತ್ತಾರಾ ಎಂಬುದು ಗೊತ್ತಾಗಿಲ್ಲ.
ಕರ್ತವ್ಯದ ವಿಚಾರಕ್ಕೆ ಬಂದರೆ ಡಿಎಸ್ ಪಿ ಹುದ್ದೆ ಎನ್ನುವುದು ಜವಾಬ್ಧಾರಿಯುತ ಹುದ್ದೆಯಾಗಿದ್ದು, ಯಾವುದೇ ಕ್ರೈಂ ನಡೆದಾಗ ಸ್ಥಳಕ್ಕೆ ತೆರಳಿ ಘಟನೆ ಬಗ್ಗೆ ಅವಲೋಕಿಸುವ ಎಲ್ಲಾ ಜವಾಬ್ಧಾರಿಯೂ ಆತನದ್ದಾಗಿರುತ್ತದೆ. ಆದರೆ ಮೊಹಮ್ಮದ್ ಸಿರಾಜ್ ಕ್ರಿಕೆಟಿಗನಾಗಿದ್ದು, ಅವರಿಗೆ ಗೌರವಪೂರ್ವಕವಾಗಿ ಈ ನೌಕರಿ ನೀಡಲಾಗಿದೆ. ಅವರ ಸಾಧನೆ ಬೇರೆಯವರಿಗೂ ಸ್ಪೂರ್ತಿಯಾಗಲಿ ಎಂಬ ಉದ್ದೇಶಕ್ಕೆ ತೆಲಂಗಾಣ ಪೊಲೀಸ್ ಅವರಗೆ ಈ ಹುದ್ದೆ ನೀಡಿ ಗೌರವಿಸಿದೆ.