Publish Date: Mon, 04 Mar 2024 (14:12 IST)
Updated Date: Mon, 04 Mar 2024 (14:15 IST)
ಮುಂಬೈ: ತೊಡೆ ನೋವಿನಿಂದಾಗಿ ಸದ್ಯಕ್ಕೆ ಟೀಂ ಇಂಡಿಯಾದಿಂದ ಹೊರಗುಳಿದಿರುವ ಕ್ರಿಕೆಟಿಗ ಕೆಎಲ್ ರಾಹುಲ್ ಇದೇ ತಿಂಗಳ ಅಂತ್ಯಕ್ಕೆ ನಡೆಯಲಿರುವ ಐಪಿಎಲ್ ಗೆ ಕಮ್ ಬ್ಯಾಕ್ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡಿದ ಬಳಿಕ ರಾಹುಲ್ ಗಾಯಗೊಂಡಿದ್ದರು. ಬಳಿಕ ಎಲ್ಲಾ ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಬೇಕಾಯಿತು. ಇದೀಗ ಬಿಸಿಸಿಐ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂಗ್ಲೆಂಡ್ ಕಳುಹಿಸಿದೆ. ಇಂಗ್ಲೆಂಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಹುಲ್ ಚೇತರಿಸಿಕೊಳ್ಳುತ್ತಿದ್ದಾರೆ.
ಈ ಮೊದಲು ರಾಹುಲ್ ಐಪಿಎಲ್ ನ ಮೊದಲ ಭಾಗಗಳಿಗೆ ಅಲಭ್ಯರಾಗುವ ಸಾಧ‍್ಯತೆ ಇದೆ ಎನ್ನಲಾಗಿತ್ತು. ಆದರೆ ಈಗ ರಾಹುಲ್ ಫಿಟ್ನೆಸ್ ಮರಳಿ ಪಡೆಯುತ್ತಿರುವ ವೇಗ ಗಮನಿಸಿದರೆ ಅವರು ಐಪಿಎಲ್ ವೇಳೆಗೆ ಫಿಟ್ ಆಗಿ ತಂಡಕ್ಕೆ ಮರಳಲಿದ್ದಾರೆ ಎನ್ನಲಾಗುತ್ತಿದೆ.
ಮಾರ್ಚ್ 22 ರಿಂದ ಐಪಿಎಲ್ ಆರಂಭವಾಗಲಿದೆ. ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ. ಕಳೆದ ಬಾರಿಯೂ ಐಪಿಎಲ್ ವೇಳೆಗೆ ಗಾಯಗೊಂಡಿದ್ದ ರಾಹುಲ್ ಕೊನೆಯ ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಸದ್ಯದಲ್ಲೇ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿರುವ ರಾಹುಲ್ ಫಿಟ್ನೆಸ್ ಸಾಬೀತುಪಡಿಸಲಿದ್ದಾರೆ. ಅದಾದ ಬಳಿಕ ಐಪಿಎಲ್ ಪಂದ್ಯಗಳಿಗೆ ಅವರು ಲಭ್ಯರಾಗಲಿದ್ದಾರೆ.