Publish Date: Fri, 23 Feb 2024 (11:41 IST)
Updated Date: Fri, 23 Feb 2024 (11:49 IST)
ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಗಾಯದಿಂದ ಚೇತರಿಸಿಕೊಂಡಿದ್ದು ಬ್ಯಾಟಿಂಗ್ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ.
ಏಕದಿನ ವಿಶ್ವಕಪ್ ನಡುವೆ ಕಾಲು ಉಳುಕಿಸಿಕೊಂಡಿದ್ದ ಪಾಂಡ್ಯ ಸುದೀರ್ಘ ಅವಧಿಯಿಂದ ಕ್ರಿಕೆಟ್ ನಿಂದ ದೂರವಿದ್ದಾರೆ. ವಿಶ್ವಕಪ್ ಅರ್ಧದಲ್ಲಿಯೇ ಹೊರನಡೆದಿದ್ದ ಪಾಂಡ್ಯ ಬಳಿಕ ಆಸೀಸ್ ವಿರುದ್ಧ, ಅಫ್ಘಾನಿಸ್ತಾನ ವಿರುದ್ಧ ಮತ್ತು ದ.ಆಫ್ರಿಕಾ ವಿರುದ್ಧ ಟಿ20 ಸರಣಿಗಳಲ್ಲಿ ಪಾಲ್ಗೊಂಡಿರಲಿಲ್ಲ.
ಇದರ ನಡುವೆ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಈ ಆವೃತ್ತಿಯ ಐಪಿಎಲ್ ಗೆ ನಾಯಕನಾಗಿ ನೇಮಕ ಮಾಡಿತ್ತು. ಇದೀಗ ಐಪಿಎಲ್ ಗೆ ಒಂದು ತಿಂಗಳು ಮಾತ್ರ ಬಾಕಿಯಿದ್ದು, ಪಾಂಡ್ಯ ಫಿಟ್ನೆಸ್ ಮರಳಿ ಪಡೆಯುತ್ತಿದ್ದಾರೆ. ಮತ್ತೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋ ಪ್ರಕಟಿಸಿರುವ ಪಾಂಡ್ಯ ಫಿಟ್ನೆಸ್ ಮರಳಿ ಪಡೆದಿರುವುದಾಗಿ ಹೇಳಿದ್ದಾರೆ.
ಪಾಂಡ್ಯ ಬ್ಯಾಟಿಂಗ್ ವಿಡಿಯೋ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಐಪಿಎಲ್ ಹತ್ತಿರ ಬರುತ್ತಿದ್ದಂತೇ ನಿಮಗೆ ಎಲ್ಲಾ ಗಾಯವೂ ಮಾಯವಾಗುತ್ತದೆ ಎಂದು ಕೆಲವರು ಕಾಲೆಳೆದಿದ್ದಾರೆ. ಮತ್ತೆ ಕೆಲವರು ಐಪಿಎಲ್ ಮುಗಿದ ತಕ್ಷಣ ಮತ್ತೆ ಗಾಯ ಶುರುವಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕನಾಗಿ ನೇಮಕಗೊಂಡ ಬಳಿಕ ರೋಹಿತ್ ಶರ್ಮಾ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡುತ್ತಲೇ ಇದ್ದಾರೆ. ಇದೀಗ ಐಪಿಎಲ್ ವೇಳೆಗೆ ಚೇತರಿಸಿಕೊಂಡಿರುವುದಕ್ಕೆ ಪಾಂಡ್ಯಗೆ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಟಾಂಗ್ ಕೊಟ್ಟಿದ್ದಾರೆ.